ಶುಕ್ರವಾರ, ಜುಲೈ 1, 2011

ಧನುರ್ಭಂಗ

ಅದು ಮಹಾಸಭೆ – ಸೀತಾ ಸ್ವಯಂವರಾರ್ಥ

ಅಲ್ಲಿಸೇರಿಹರ್ - ಫಳಫಳಹೊಳೆವ ಭೂಷ

ಣಂಗಳ ಖಂಡಖಂಡಾತರದ ದೊರೆಗಳು

ಶಿವಧನುರ್ಭಂಗಕ್ಕೆ ಆಗಮಿಸಿದವರು

ಸಾಲುಗಳನ್ನು ತಿದ್ದಿ ಮಹಿಪಾಲರು ಸ್ವರ್ಣಸುಪೀಠವೇರಿರಲ್

ಸೇರಿದವೆಲ್ಲ ದೃಷ್ಟಿ ನಯನಂಗಳ ಶೋಭಿಪ ದೊಡ್ಡಬಿಲ್ಗೆ, ಶೃಂ

ಗಾರ ಮಧೂಕಮಾಲಿಕೆಯು ಕೈಲಿರೆ ಜಾನಕಿಯನ್ನು ನೋಡಿ ಬಾ

ಯೂರಿತು ಕಂಡಭೂಪರಿಗೆ ತಂದೆಯ ಪಕ್ಕಕುಮಾರಿ ನಿಂತಿರಲ್

ಆಕೆಯ ಕಣ್ಗಳಲ್ಲಿ ನೆರೆಸೂಸುವುದುಜ್ವಲ ದಿವ್ಯದೀಪ್ತಿ ಮು-

ಲ್ಲೋಕಗಳಾಳ್ವ ರಾಜಸವು ತಾನೊದಗಲ್ – ರಘುರಾಮಮೂರ್ತಿ ತಾ

ನಾಕೃತಿಗೊಂಡ ವೀರರಸದಂತೆ ಮುನೀಂದ್ರನ ಹಿಂದೆ ನಿಂತ ನಾ

ಜೂಕಿನ ಭಂಗಿಯಲ್ಲಿ ಸಹಜಾತನ ಕೂಡಿ ಮನೋಭಿರಾಮನೊಲ್

ಸ್ವಾಗತವೈ ಸ್ವಯಂವರ ಸಮಾಗತ ರಾಜಕುಮಾರ ಧೀರರೇ

ಆಗಮನಕ್ಕೆದಲ್ ಹೃದಿ ಪ್ರಹರ್ಷ ಪರಿಫ್ಲುತವಾಯ್ತು – ಈ ಧನು

ರ್ಯಾಗದಿ ಸಾಂಬಕಾರ್ಮುಕವ ನೆತ್ತುತಕಟ್ಟುವ ನಾವನಾ ಮಹಾ

ಭಾಗನಿಗರ್ಧಭಾಗಿನಿಯ ಮಾಳ್ಪೆನು ಮತ್ಸುತೆಯಂಸಭಾಮುಖಂ”

ಎನುತಲಿ ಮೈಥಿಲೇಂದ್ರ ನಿಜಪೀಠಕೆ ಸಾರ್ದಿರೆ ಹಸ್ತತಾಡನ

ಧ್ವನಿ ಮುಗಿಲೇರಿರಲ್, ನತಮುಖೀ ಮುಖಪದ್ಮವ ನೋಡಲೋಡುತಲ್

ತಣಿಯೆ ನರೇಂದ್ರಪುತ್ರರ ಸತೃಷ್ಣ ವಿಲೋಕನ ಭೃಂಗಪಂಕ್ತಿ, ಝ-

ಲ್ಲೆನಲೆದೆ ಮೈಯದೆಲ್ಲ ಪುಲಕಂ ಮಿಥಿಲಾಪುರಿ ಮುದ್ದುಪುತ್ರಿಗಂ

ಮದಗಜವಪೋಲ್ವ ರಾಜಕುಮಾರಜಟ್ಟಿಗಳು

ಬಲವಂತರೆಷ್ಟೊಜನರೆದ್ದುನಿಂತರು ತುಡುಕೆ

ಶಿವಧನುರ್ಭಂಗ ಬಿಡಿ ಶೃಂಗಭಂಗವದಾಯ್ತು

ಸೋತರು, ಸಮಸ್ತ ಸಭ್ಯ ಸಮಕ್ಷದಲ್ಲಿಯೇ

ಮುನಿ ನಸುನಕ್ಕು ತನ್ನ ಪ್ರಿಯಶಿಷ್ಯನ ನೋಡೆ ಸರಾಗದಿಂ ಶರಾ

ಸನವನು ತಮ್ಮನಿಂಗೊಸಗಿ ಸೀತೆಯ ನೋಡುತಲೋರೆನೋಟದೊಳ್

ವಿನಮಿತನಾಗಿ ವಂದಿಸುತ ಮೌನಿಯ, ಸಿಂಹಕಿಶೋರದಂತೆ ತ

ದ್ಧನುವನು ಸಾರೆ ರಾಜರುಗಳಚ್ಚರಿಯಿಂದೆವೆಯಿಕ್ಕದೀಕ್ಷಿಸಲ್

“ಫೆಳ್ಳೆ”ನಲು ಬಿಲ್ಲು, ಗಂಟೆಗಳು “ಘಲ್ಲೆ” ನುತಿರೆ, “ಗು

ಭಿಲ್ಲೆ”ನಲು ರಾಜರೆದೆಗಳು, ಜಾನಕೀದೇಹ

“ಝಲ್ಲೆ” ನುತ ಪುಲಗಗೊಳಲೊಂದೆನಿಮಿಷದೊಳಗಾ

ಯ್ತಿಲ್ಲಿ ನಯ,ಜಯವು,ಭಯ,ವಿಸ್ಮಯಗಳೆಲ್ಲವುಂ

ನಾಚಿಕೆಯಭಾರದಿಂ ಶಿರವಬಗ್ಗಿಸಿದಳೊ

ಬ್ಬಳೆಸೀತೆಯಲ್ಲ ಕ್ಷಿತಿಪತಿಗಳೆಲ್ಲರು ಜೊತೆಗೆ

ಪೂಮಳೆಗರೆದವರು ಸುಮಂಗಲಿಯರಷ್ಟಲ್ಲ

ದೇವತಾ ಗ್ರಾಮಣಿಗಳೊಡನೆ ಮೇಲ್ನೆರೆದು

ಲಕ್ಷ್ಮಿಯೊಲುಸೀತಾಮಹಾಲಕ್ಷ್ಮಿ ಶ್ರೀವಿಜಯ

ಲಕ್ಷ್ಮಿಯಿಂಶ್ಯಾಮನಿಗೆ ಗೃಹಲಕ್ಷ್ಮಿಯಾದಳ್

ಭರತ ಜನಯಿತ್ರಿ ಯಳ್ತಿಯಬಾಷ್ಪಜಲದಲ್ಲಿ

ಅತಿ ವೈಭವದೊಳಾಯ್ತು ಸೀತಾವಿವಾಹ

(ಮೂಲ:ಡಾ. ಕರುಣಶ್ರೀ : “ಉದಯಶ್ರೀ” ಭಾಗ – ೧)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ