ಬುಧವಾರ, ಸೆಪ್ಟೆಂಬರ್ 7, 2011

ಸಮಸ್ಯೆ - "ನಳನಳಿಸದೆಯೆ ಸೋತರವರು ಪ್ರಕೃತಿಯೀಶ್ವರರು"

ಸೆಳೆಹಿತದಿಕಸ ಶರಧಿಸೇರುಗೆ
ಕೆಳೆಹಿತದಧಮ ಹಿರಿದುಕಾಂಬುಗೆ
ಕಳೆಹಿತದಭಾಮಿನಿಯು ಶರಣಗೆ ದಾರಿ ತೋರುವಳು
ತಳೆದೆನೀಗಲೆ ಕಾವ್ಯ ಸಂಶಯ
ಗೆಳೆಯಹಿತಜನರಿದನು ಪರಿಕಿಸಿ
"ನಳನಳಿಸದೆಯೆ ಸೋತರವರು ಪ್ರಕೃತಿಯೀಶ್ವರರು"
ಮೊದಲು, ಸಮಸ್ಯೆಯನ್ನು
"ನಳನಳಿಸದೆಯೆ ಸೋತರವರು ಪ್ರಕೃತೀಶ್ವರರು"
ಎಂಬುದಾಗಿರಿಸಿದ್ದೆ. ಅದರಲ್ಲಿ ಚ್ಛಂದೋದೋಷವಿತ್ತು.
ಗಣೇಶರ ಸಲಹೆಯಂತೆ, ಅದನ್ನು ಬದಲಿಸಿದ್ದೇನೆ.
ಸಮಸ್ಯೆ - ಭಾಮಿನಿಯಲ್ಲಿ ಕೊನೆಯ ಸಾಲು ಬರುವಂತೆ
"ನಳನಳಿಸದೆಯೆ ಸೋತರವರು ಪ್ರಕೃತಿಯೀಶ್ವರರು"

16 ಕಾಮೆಂಟ್‌ಗಳು:

  1. ಸಮಸ್ಯೆಯಲ್ಲಿಯೇ ಒಂದು ಚ್ಛಂದೋದೋಷವಿದೆ:
    ಪ್ರಕೃತೀಶ್ವರರು ಎಂಬಲ್ಲಿ ಪ್ರ ಎನ್ನುವ ವರ್ಣವು ಗುರುವಾಗದು. ಏಕೆಂದರೆ ಅದರ ಬಳಿಕ ಬರುವ ಕೃ ವರ್ಣವು ಸಂಯುಕ್ತಾಕ್ಷರವಲ್ಲ; ಅದೇನಿದ್ದರೂ ಕೇವಲ ಒಂದು ಸ್ವರ ಸೇರಿದ ಕ್ ವರ್ಣ ಮಾತ್ರ.
    ಪರಿಹಾರದಲ್ಲಿಯೂ ಗಣಗತಿಗಳ ಭಂಗವಾಗಿದೆ; ಅಲ್ಲಲ್ಲಿ ಅರಿಸಮಾಸದಂಥ ವ್ಯಾಕರಣದೋಷಗಳೂ ಇಣಿಕಿವೆ..
    ಸ್ನೇಹಾಚ್ಚ ಬಹುಮಾನಾಚ್ಚ ಸ್ಮಾರಯೇ ನ ತು ಶಿಕ್ಷಯೇ!!

    ಪ್ರತ್ಯುತ್ತರಅಳಿಸಿ
  2. ಗಣೇಶರು ಹೇಳಿದ ಕೆಲವು ವಿಚಾರಗಳು:
    ೧) ಸೆಳೆಹಿತ, ಕೆಳೆಹಿತ ಇವೆಲ್ಲಾ ಅರಿಸಮಾಸಗಳು. (ಸಂಸ್ಕೃತ ಮತ್ತು ಕನ್ನಡ ಪದಗಳನ್ನು ಸಮಾಸದಲ್ಲಿ ಉಪಯೋಗಿಸಬಾರದು).
    ೨) ಅತಿಯಾದ ಲಘುಗಳ ಬಳಕೆಯಿಂದ ರಚನೆ loose ಆಗುವ ಸಾಧ್ಯತೆ ಇರುತ್ತದೆ.
    ೩) ಗಣಗತಿ - ಆದಷ್ಟೂ ಭಾಮಿನಿಯ ಗತಿಯ ಬಗೆಗೆ ಗಮನವಿರಿಸಿರಬೇಕು (೩ -೪ ರ ಲಯ). ಸಾಮಾನ್ಯವಾಗಿ ಒಂದು ಮಾತ್ರಾಗಣದಿಂದ ಒಂದು ಲಘುವನ್ನು ಮಾತ್ರ ಇನ್ನೊಂದು ಮಾತ್ರಾಗಣಕ್ಕೆ ಸೇರಿಸಬಾರದು.
    ೪) ಜಗಣಗಳು ಒಂದು ಮಾತ್ರಾಗಣವಾಗಿ ಬರಬಾರದು. (ಲಘು ಗುರು ಲಘು)

    ಸರ್, ನೀವು ಹೇಳಿದ್ದರಲ್ಲಿ ಎಷ್ಟನ್ನೋ ಬಿಟ್ಟಿದ್ದೇನೆ. ತಪ್ಪಿದ್ದರೆ ಸರಿಪಡಿಸಿರಿ.

    ಪ್ರತ್ಯುತ್ತರಅಳಿಸಿ
  3. ಬೆಳೆದು ಮಿತಿಗಳ ಮೀರಿ ಜಗದಲಿ
    ತಳೆದು ವಿಷಯಗಳಮಿತ ಹಸಿವನು
    ಸೆಳೆದರೀ ಸ್ವಾರ್ಥದಲಿ ಮನುಜರು ತಾಯ ಸಾರವನು |
    ತಿಳುವಳಿಕೆ ಜನರಲ್ಲಿ ಮೂಡಿಸ -
    ದಳಲು ಕೇಡನು ತಡೆಯಲಾರದ
    ನಳನಳಿಸದೆಯೆ ಸೋತರವರು ಪ್ರಕೃತಿಯೀಶ್ವರರು ||

    ಪ್ರತ್ಯುತ್ತರಅಳಿಸಿ
  4. ತಳೆಹಿದರು ರಘುವಂಶದಲಿ ದೊರೆ-
    ಗಳು ಪುರಾತನ ಮೆರೆಗ ಮರೆಸೆನೆ
    ನಳರು, ಪುಷ್ಕರ, ಅಗ್ನಿವರ್ಣರು, ನಭರು, ಪುಂಡ್ರಕರು...
    ಅಳೆಯೆ ವಿಜ್ರುಂಭಗಳ ವೈಭವ
    ಕಳೆಯೆ ಧರ್ಮವು ರಾಜನೀತಿಯು
    ನಳನಳಿಸದೆಯೆ ಸೋತರವರು ಪ್ರಕೃತಿಯೀಶ್ವರರು

    ಪ್ರತ್ಯುತ್ತರಅಳಿಸಿ
  5. ಪ್ರಕೃತಿಯ (ಪ್ರಜೆಗಳ), ಪ್ರಕೃತಿಯೀಶ್ವರರು = ರಾಜರು

    ಪ್ರತ್ಯುತ್ತರಅಳಿಸಿ
  6. ಸೋಮರವರೇ, ಸುಮ್ಮನೆ ಕುತೂಹಲಕ್ಕಾಗಿ ಕೇಳುತ್ತಿದ್ದೇನೆ: ಪ್ರಕೃತಿ ಮತ್ತು ಪುರುಷ = ಶಕ್ತಿ ಮತ್ತು ಈಶ್ವರ ಆದ್ದರಿಂದ ಇದನ್ನು ಶಕ್ತಿ & ಶಿವ ಎಂದು ತೆಗೆದುಕೊಳ್ಳಬಹುದೇ?

    ಪ್ರತ್ಯುತ್ತರಅಳಿಸಿ
  7. ಮಕರ ಅವರೇ,
    ಪ್ರಕೃತಿ-ಪುರುಷ ಎಂದರೆ ಶಕ್ತಿ-ಶಿವ ಎಂಬುದು ಖಂಡಿತವಾಗಿಯೂ ಪ್ರಸಿದ್ಧ... ಆದರೆ ನಳನಳಿಸದೆಯೇ ಸೋತಿರುವ ಸಂಧರ್ಭದಲ್ಲಿ ಇವರನ್ನು ತರುವುದಕ್ಕೆ ಜಾಣತನದ ಅವಶ್ಯಕತೆ ಇದೆ. ನಾನು ಸುಲಭ ಮಾರ್ಗ ಹುಡುಕಿಕೊಂಡೆ.

    ಪ್ರತ್ಯುತ್ತರಅಳಿಸಿ
  8. ರಾಮ್, ಚೆನ್ನಾಗಿದೆ. ದುರಾಸೆಯಿಂದಾಗಿ, ದುರ್ಭಳಕೆಯಿಂದಾಗಿ, ಪರಿಸರ ಸಪ್ಪೆಯಾಗುತ್ತಿದೆ ಎನ್ನುವ ಅರ್ಥವೂ ಇದರಲ್ಲಿದೆ.

    ಸೋಮರವರೆ, ಪ್ರಕೃತಿಗೆ ಜನರು ಎಂಬುದಾಗಿ ಚೆನ್ನಾಗಿ ಅರ್ಥ ಮಾಡಿದ್ದೀರಿ. ನೀವು ಉಪಯೋಗಿಸಿದ ಮೇಲೆ ರತ್ನಕೋಶದಲ್ಲಿ ನೋಡಿದಾಗ, ಹಲವು ಅರ್ಥಗಳಿರುವುದು
    ತಿಳಿಯಿತು.

    ಕೆಲವು ಸಂಶಯಗಳು:
    ತಳೆಹಿದರು - ಇದು ಸರಿಯಾಗಿದೆಯೇ? ತಳೆದರು ಎಂದಷ್ಟೇ ಆಗಬೇಕಲ್ಲವೇ? ತಳುಹು ಎಂಬ ಪದ ಇದೆ. ಆದರೆ ಆ ಅರ್ಥ ಇಲ್ಲಿ ಸರಿ ಬರುವುದಿಲ್ಲ.
    ಅಳೆಯೆ - ಅಳಿಯೆ ಎಂದು ಆಗಬೇಕಿತ್ತಲ್ವಾ?

    ಪ್ರತ್ಯುತ್ತರಅಳಿಸಿ
  9. ನನ್ನ ಪರಿಹಾರ: ನಳನ + ಅಳಿಸದೆಯೆ ಎನ್ನುವ ಅರ್ಥದಲ್ಲಿ ಉಪಯೋಗಿಸಿದ್ದೇನೆ.

    ಇಳೆಯರಮೆ ದಮಯಂತಿಯನುಪಮೆ
    ನಳನಲನುನಯ ತಳೆದಳಾಗಲೆ
    ತಳಮಳಿಸುತಲಿ ದೇವಜನ ಮನ ಕೆಡಿಸುವಂದದಲಿ|
    ಹೊಳೆದ ತಂತ್ರಗಳಿಂದ ತರುಣಿಯ
    ಸೆಳೆಯಲೆತ್ನಿಸಲವಳ ಮನದಿಂ
    ನಳನಳಿಸದೆಯೆ ಸೋತರವರು ಪ್ರಕೃತಿಯೀಶ್ವರರು||

    ಪ್ರತ್ಯುತ್ತರಅಳಿಸಿ
  10. ಹೊಳ್ಳ,

    ನಳ + ಅಳಿಸದೆಯೆ ಎನ್ನುವ ಪರಿಹಾರ ತುಂಬಾ ಚೆನ್ನಾಗಿದೆ :)

    ನನ್ನ ಪರಿಹಾರವನ್ನು ಸರಿಪಡಿಸಿದ್ದೇನೆ:
    ತಳೆದಿಹರು ರಘುವಂಶದಲಿ ದೊರೆ-
    ಗಳು ಪುರಾತನ ಮೆರೆಗ ಮರೆಸೆನೆ
    ನಳರು, ಪುಷ್ಕರ, ಅಗ್ನಿವರ್ಣರು, ನಭರು, ಪುಂಡ್ರಕರು...
    ಅಳಿಯೆ ವಿಜ್ರುಂಭಗಳ ವೈಭವ
    ಕಳೆಯೆ ಧರ್ಮವು ರಾಜನೀತಿಯು
    ನಳನಳಿಸದೆಯೆ ಸೋತರವರು ಪ್ರಕೃತಿಯೀಶ್ವರರು

    ಪ್ರತ್ಯುತ್ತರಅಳಿಸಿ
  11. ಅರಿಸಮಾಸ ಮತ್ತು ಗಣಗತಿ ದೋಷದಿಂದ ಹೊರ ಬರುವ ಪ್ರಯತ್ನ:

    ಸೆಳೆತದಲಿಕಸ ಶರಧಿಸೇರುಗೆ
    ಗೆಳೆಯನಿರಧಮ ಹಿರಿದುಕಾಂಬುಗೆ
    ಕಳೆಯ ಭಾಮಿನಿ ನಯದಿ ಶರಣಗೆ ದಾರಿ ತೋರುವಳು

    ಪ್ರತ್ಯುತ್ತರಅಳಿಸಿ
  12. ಹೊಳ್ಳ ಹೇಳಿದಂತೆ ತಳೆಹು ಎನ್ನುವ ಪ್ರಯೋಗ ಸಾಧುವಾಗದು. ಸೋಮ ಇದನ್ನು ಸರಿಪದಿಸಿಕೊಳ್ಲಬೇಕು ಅಲ್ಲದೆ ಹಲವೆಡೆ ಸಾಮಾನ್ಯವ್ಯಾಕರಣದೋಷಗಳೂ ಅರಿಸಮಾಸಗಳೂ ಬಂದಿವೆ. ಇದು ಹೊಳ್ಳರ ಕವಿತೆಯಲ್ಲಿಯೂ ಉಳಿದಿರುವ ದೋಷ. ಇವನ್ನೆಲ್ಲ ಮುಖತಃ ಹೇಳಿ ವಿವರಿಸಬಹುದಲ್ಲದೆ ಇಲ್ಲಿ ತಿಳಿಸಲು ಕಷ್ಟ.ನನ್ನ ಮಾತಿಗೆ ಯಾರೂ ದಯಮಾಡಿ ಬೇಸರಿಸಬಾರದು...

    ಪ್ರತ್ಯುತ್ತರಅಳಿಸಿ
  13. ಸಾರ್,
    ನಮಗೆ ಬೇಸರವಿಲ್ಲ, ಅದರ ಬದಲು ಹೆಚ್ಚು ಸಂತೋಷವೇ :)
    ನೀವು ನಿರ್ದಾಕ್ಷಿಣ್ಯವಾಗಿ ತಿದ್ದುಪಡಿ ಮಾಡುವುದೇ ನಮಗೆ ಒಳ್ಳೆಯದು. ಅರಿ ಸಮಾಸಗಳನ್ನು ಗುರುತಿಸುವುದು ಮತ್ತು ನಿಭಾಯಿಸುವುದು ಕೆಲವುಕಡೆ ತೊಡಕೆನ್ನಿಸುತ್ತದೆ. ನಿಮ್ಮೊಡನೆ ಮಾತಾಡಿ ಸರಿ ಪಡಿಸಿಕೊಳ್ಳುತ್ತೇನೆ, ಉಳಿದ ವ್ಯಾಕರಣ ದೋಷಗಳಬಗ್ಗೆಯೂ ತಿಳಿದುಕೊಳ್ಳುತ್ತೇನೆ.

    ಪ್ರತ್ಯುತ್ತರಅಳಿಸಿ
  14. ಗಣೇಶರಿಗೆ:‌ ಈ ತಿದ್ದುಪಡಿಗಳಿಂದ ನಮ್ಮ ಪದ್ಯಗಳು ಹಾಗು ನಮ್ಮ ಶಕ್ತಿಯು ಹೆಚ್ಚಾಗುವಾಗ ಬೇಸರದ ಪ್ರಶ್ನೆ ಬರದು.
    ಸೋಮ - ತಪ್ಪುಗಳು ಎಲ್ಲರ ಪದ್ಯಗಳಲ್ಲೂ ಇರುತ್ತವೆ. ಒಬ್ಬೊಬ್ಬರೇ ತಿಳಿದುಕೊಳ್ಳುವ ಬದಲು ಒಟ್ಟಿಗೆ ಮಾಡಿದರೆ ಎಲ್ಲರಿಗೂ‌ ಒಳ್ಳೆಯದು.

    ಪ್ರತ್ಯುತ್ತರಅಳಿಸಿ
  15. ಸೋಮಶೇಖರ್,
    ಕೆಲವು ದಿನಗಳಿಂದ ಪ್ರಯಾಣಿಸುತ್ತಿದ್ದೆನಾದ್ದರಿಂದ ಕಾವ್ಯಕುತೂಹಲವನ್ನು ಗಮನಿಸಲು ಆಗಿರಲಿಲ್ಲ. ಗಣೇಶರ ಮಾರ್ಗದರ್ಶನ ಸಕ್ರಿಯವಾಗಿದ್ದು,ವಿಚಾರವಿನಿಮಯವಾಹಿನಿಯ ಹರಿವು ಚೆನ್ನಾಗಿದೆ. ಒಂದು ಪದಪ್ರಯೋಗದ ಬಗ್ಗೆ ಮಾತ್ರ ಹೇಳಬೇಕಿದೆ.

    ನಳನಳಿಸದೆಯೆ ಎಂಬ ಪದ, ನಳನನ್ ಅಳಿಸದೆಯೆ ಎನ್ನುವ ಅರ್ಥ ಕೊಡಲು, ನಳನನಳಿಸದೆಯೆ ಆಗಬೇಕಾಗುತ್ತದೆ. ಹಾಗಿಲ್ಲವಾದರೆ, ನಳನನ್+ಇಸದೆಯೆ ಆಗುವುದೇ ಹೊರತು, ನಳನ + ಅಳಿಸದೆಯೆ ಆಗಲಾರದೆಂದು ನನ್ನ ಅನಿಸಿಕೆ. ಸಮಸ್ಯೆಯ ನೀಡಿಕೆಯಲ್ಲಿ ಇಂಥ ಪದಪ್ರಯೋಗಗಳು, ಪರಿಹಾರ ರಚನೆಗೆ ಗೊಂದಲವೊಡ್ದಬಹುದು. ವ್ಯಾಕರಣಶಾಸ್ತ್ರಾದಿಗಳ ಬಲ ಒಂದು ರೆಕ್ಕೆಯಾದರೆ, ಓದುಗನ ಅರ್ಥಸೌಲಭ್ಯ- ಸಮಕಾಲೀನ ಶಬ್ದಾರ್ಥಸ್ಫುರಣೆ ಮತ್ತೊಂದು ರೆಕ್ಕೆಯಾಗಿ, ಎರಡೂ ಸರಿಸಮವಾಗಿದ್ದಲ್ಲಿ ಪದ್ಯಪಕ್ಷಿಯ ಯಾನ ಸುಗಮವೆನಿಸುತ್ತದೆ.

    ಪ್ರತ್ಯುತ್ತರಅಳಿಸಿ
  16. ಗಣೇಶ್ ಸರ್, ಎಂಥಾ ಮಾತು..ನನ್ನದಂತೂ ದಪ್ಪದ ಚರ್ಮ. ನೀವು critical ಆಗಿ ಬರೆದರೇ, ಸ್ವಲ್ಪವಾದರೂ ತಾಗೀತು. "ಗೆಳೆಯನಿರಧಮ" ತಪ್ಪಿದೆ ಎನ್ನಿಸುತ್ತಿದೆ. "ಗೆಳೆಯನಿರೆಯಧಮ" ಎಂದು ಮಾತ್ರವೇ ಆಗುತ್ತದೆ.
    ಚಂದ್ರಮೌಳಿಯವರೆ, ನಾನು ದ್ವಿತೀಯ ಮತ್ತು ಷಷ್ಠಿ ವಿಭಕ್ತಿಗಳ ಬಳಕೆಯಲ್ಲಿ ತಪ್ಪಿರುವುದನ್ನು ತೋರಿಸಿದ್ದೀರಿ. ಆದರೆ, ಈ ಬಳಕೆ ಸಾಮಾನ್ಯವಾಗಿ ಬಿಟ್ಟಿದೆಯಲ್ಲವೇ? "ರಾವಣನ ಕೊಲ್ಲದೆಯೆ ಇರುವೆನೇ?" ಎಂಬಲ್ಲಿ ತುಂಬ ಸಹಜವನಿಸುತ್ತದೆ. ಆದರೆ, confusion ಇರುವುದು ನಿಜ.

    ಪ್ರತ್ಯುತ್ತರಅಳಿಸಿ