ಬುಧವಾರ, ಸೆಪ್ಟೆಂಬರ್ 14, 2011

ಪಂಚಮಾತ್ರಾಗಣದ ಚೌಪದಿಯಲ್ಲಿ ಮುಂಜಾನೆಯ ಬಣ್ಣನೆ

ಇದು ಗಣೇಶ ರವರು ಕೊಟ್ಟ ಸಮಸ್ಯೆ

ಬರಿಯ ಭಾಮಿನಿಯಲ್ಲಿ ಸಾಗು-
ತ್ತಿರುವ ಕಾವ್ಯಕುತೂಹಲದಿ ಜನ
ತೊರೆವರೇನೋ ಕುತುಕವನ್ನೆನುತೆನಗೆ ಸಂದೇಹ
ಸ್ಫುರಿಸಿತೀಗಳೆ ನಿಮ್ಮ ಜಾಣ್ಮೆಯು
ತರದೆ ಭಾಮಿನಿಯನ್ನು ನೋಡರು
ತೆರೆಯನೂ ರಸಿಕರ್ಗಳಂತೆಯೆ ಗಡಿದು ’ಐಟಮ್ ಸಾಂಗ್"!!

ಈ ಕಾರಣದಿಂದ ನಾನೇ ಒಂದು ವಸ್ತುವನ್ನು ಕೊಡುತ್ತಿದ್ದೇನೆ.
ಪಂಚಮಾತ್ರಾಗಣದ ಚೌಪದಿಯಲ್ಲಿ ಮುಂಜಾನೆಯ ಬಣ್ಣನೆಯಾಗಬೇಕು. ಎಷ್ಟು ಪದ್ಯಗಳಾದರೂ ಸರಿ, ಹೊಸ ಹೊಸ ಕಲ್ಪನೆಗಳಿಂದ ಕೂಡಿರಬೇಕೆಂಬುದೇ ಮುಖ್ಯನಿಯಮ.
ಮೊದಲಿಗೆ ನನ್ನ ಪದ್ಯದಿಂದಲೇ ಆರಂಭ; charity begins at home ಎಂದು ಗಾದೆಯಲ್ಲವೆ!

ಹಾಡುಹಕ್ಕಿಗಳೋಳಿ ಗುರು-ಲಘುಗಳಂತಾಗೆ
ಮೂಡುವೆಣ್ಣಿನ ಕೆಂಪು ರಸವಾಗಿರೆ
ಮೋಡಿಮಾಡುವ ಮಲರಲಂಕೃತಿಗಳೆನಿಸಿರಲು
ನೋಡಿ ನಸುಕಿನ ಕವನ ನವನವೀನ

29 ಕಾಮೆಂಟ್‌ಗಳು:

  1. ಕೈಲಾಸಗಿರಿಗೆ ರವಿಯ ಪ್ರಭಾತಪೂಜೆ

    ಕಿರಣ ರಾಗಸುಮಾರ್ಚನೆಯ ಗೈದು ಕೈಲಾಸ
    ಗಿರಿಪದಕೆ, ಮೇಲೇರಿ ವರ್ಣ ನವ್ಯ
    ಶಿರಕೆ ಬರೆ ಹೇಮಾಂಬರವೊ ಚಿದಂಬರಗೆ ಭಾ-
    ಸ್ಕರ ಶಿವಾರ್ಚನೆ ಭವ್ಯ ನಿತ್ಯ ದಿವ್ಯ

    ಪ್ರತ್ಯುತ್ತರಅಳಿಸಿ
  2. ಪಶುಪಕ್ಷಿಸ್ವರ ಸಪ್ತಸ್ವರ ಮೇಳವೇ ಸ್ವರಸೂರ್ಯೋದಯ


    ’ಸ ’ ವನುಡಿಯೆನವಿಲು ರಿಗಮಪದನಿಯ ವೃಷಭ ಮೇ
    ಷವು ಕ್ರೌಂಚ ಪಿಕ ಹಯ ಗಜಾದಿಗಳು ಸೇರೆ
    ನವಗೀತಕಿಳೆಯ ಸಪ್ತಸ್ವರವು ಮೇಳವಿಸಿ
    ರವಿಯುದಯ ನಿಶ್ಶಬ್ದ ಸಂಗೀತ ಧಾರೆ

    ಪ್ರತ್ಯುತ್ತರಅಳಿಸಿ
  3. ನಿನ್ನೆಗೆ ಅಳದೆ, ನಾಳೆಗೆ ಅಂಜದೆ, ಇಂದಿಗೆ ಬದುಕಲು ಹೇಳುವನೇ ರವಿ?

    ಹತ್ತಿಕ್ಕಿ ನಿನ್ನೆಗಳ ಚಿಂತೆಗಳ ಸೊನ್ನೆಗಳ
    ಕತ್ತಲನ್ನೊತ್ತಿ ’ಪ್ರಸ್ತುತ‘ ಗಭಸ್ತಿ
    ನೆತ್ತರೂಡಲು ನಿತ್ಯಜೀವನಕೆ ಮೂಡುತಿಹ
    ಪ್ರಸ್ತುತಕೆ ಕೊಡಲು ನೀತಿ ಪ್ರಶಸ್ತಿ

    ಪ್ರತ್ಯುತ್ತರಅಳಿಸಿ
  4. ಬುವಿಯನೋಲೈಸೆ ಚಂದ್ರ, ರವಿನೋಲೈಸೆ ಭೂಮಿ !


    ತಿರೆವೆಣ್ಣ ಪೆರೆ ಸುತ್ತಿ, ತಿರೆ ರವಿಯ ಸುತ್ತುತಿರೆ
    ಇರುಳಡಗಿ ಮುತ್ತನೊತ್ತಿರೆ ಪೂರ್ವದಿ
    ಸ್ಮರಕಾಂತಶಕ್ತಿ ಭೂಭಾನುಮಿಲನಭ್ರಮೆಗೆ
    ತರೆ ರಾಗರತಿ ಗರತಿ ನಾಚಿ ಮುದದಿ

    ಪ್ರತ್ಯುತ್ತರಅಳಿಸಿ
  5. ನೇಸರನ ಕೆಂಗಿರಣ ಬೆಟ್ಟದಿಂಬದಿಯಿಂದ
    ಸೂಸುತಿರಲಸ್ಪಷ್ಟ ದೃಶ್ಯವನ್ನು ಕಂಡು
    ಕೂಸಬೆಚ್ಚನೆ ಕೆಂಡದುಷ್ಣದಲಿ ಮುಂಜಾನೆ
    ಕಾಸುತಿರುವೆನೆ ಭಾಸವಾಯಿತೆನಗೆ

    ಪ್ರತ್ಯುತ್ತರಅಳಿಸಿ
  6. ಬೆಟ್ಟದಿಂಬದಿ - ಬೆಟ್ಟದ ಹಿಂಬದಿ
    ಕಾಸು - ಕಾಯಿಸು

    ಪ್ರತ್ಯುತ್ತರಅಳಿಸಿ
  7. ಬೋಳುಹಣೆ ಭುವಿಗಿಟ್ಟ ಸಿ೦ಧುರವೊ ಜನರಜಡ
    ರೋಗ ತೊಲಗಿಪ ಗುಳಿಗೆಯೋ |
    ವಾರಿಧಿಯ ಬಸಿರ್ಗೀವ ಕೇಸರಿಯೆನಲ್ಕವಿಯು
    ರವಿಯೆದ್ದ ಮೂಡಣದಿಯುಜ್ಜಿಕಣ್ಣಾ ||

    ಪ್ರತ್ಯುತ್ತರಅಳಿಸಿ
  8. ನಸುಕು ತಾಯಿಯು ಬಂದು ಜೀವಿಗಳನೆಬ್ಬಿಸುತ
    ಹೊಸದಿವಸದಾ ಗತಿಗೆ ಚೋದಿಸಿಹಳು |
    ತುಸು ರಂಗಿನಾ ಒಲವು ತುಸು ಶಬ್ದಗಳ ಗಡಸು
    ಕಸು ತುಂಬುತೆಲ್ಲರನು ಹುರಿದುಂಬಿಸುವಳು ||

    ಲಯದಿಂದ ಸೃಷ್ಠಿಯೆಡೆ ತಮದಿಂದ ರಜಸಿನೆಡೆ
    ಶಯನದಿಂ ಕರ್ಮದೆಡೆ ದೂಡಿರುವಳು |
    ಪ್ರಿಯಸೊಗಸಿನಾಶೆಗಳ ತೋರಿಸುತ ಮಾಯೆದೇ -
    ವಿಯ ಮೋಡಿಯೆಡೆಗೆಮ್ಮ ಹುರುಪಿಸಿಹಳು ||

    ಪ್ರತ್ಯುತ್ತರಅಳಿಸಿ
  9. ಚಂದ್ರಮೌಳಿಯವರ ಕವಿತೆಗಳು ತುಂಬ ಒಳ್ಳೆಯ ಶೈಲಿಯಲ್ಲಿವೆ. ಅಲ್ಲಿ ಆದ್ಯಂತ ಪ್ರಾಸಗಳೂ ಬಂದಿವೆ.
    ರಾಮಚಂದ್ರರ ಕವಿತೆಗಳ ಕಲ್ಪನೆಯೂ ಚೆನ್ನಾಗಿದೆ. ಅವರ ಮೊದಲ ಪದ್ಯದ ಕೊನೆಯ ಸಾಲಿನಲ್ಲಿ ’ಕಸುದುಂಬುತೆಲ್ಲ ಹುರಿದುಂಬಿಸುವಳು’ ಎಂದು ಸವರಣೆ ಮಾಡಿದರೆ ಛಂದಸ್ಸು ಸರಿಯಗುವುದು.
    ಸೋಮರ ಕವಿತೆಗಳ ಕಲ್ಪನೆಯೂ ಹೃದ್ಯ. ಆದರೆ ’ಗಿರಿಯ ಹಿಂಬದಿ’ ಎಂದಲ್ಲಿ ವ್ಯಾಕರಣ ಸರಿಯಾಗುವುದು. ಜೊತೆಗೆ ’..ದೃಶ್ಯ ಕಂಡು’ ಎಂದೇ ಸಾಲು ಮುಗಿಸಿದರೆ ಛಂದಸ್ಸು ಸರಿಯಾಗುತ್ತದೆ.
    ಶ್ರೀಶರ ಪದ್ಯದ ಕಲ್ಪನೆಯೂ ಚೆನ್ನ. ಆದರೆ ಸಿಂಧುರ ಎಂದರೆ ಆನೆ ಎಂದು ಅರ್ಥ.ಅದು ಸಿಂದೂರ ಎಂದೇ ಆಗಬೇಕು. ಆದರೆ ಛಂದಸ್ಸು ಕೆಡುತ್ತದೆ. ಇದನ್ನು ಸರಿಮಾಡಲು ’ತಿಲಕವೋ’ ಎಂದು ಸವರಿಸಿದರೆ ಎಲ್ಲ ಯುಕ್ತವಾಗುತ್ತದೆ.
    ಒಟ್ಟಿನಲಿ ತತ್ತ್ವವಿದು, ಕಲ್ಪನೆಯೊಳಾರಿಗೂ
    ಕೆಟ್ಟ ಬಡತನವಿಲ್ಲ; ಕವಿತೆಯಿದುವೇ
    ಕಟ್ಟೋಣದೊಳು ಕೆಲವು ಕುಂದು-ಕೊರತೆಗಳಿಹುವು
    ತಟ್ಟಿ ಮೇಲೆಬ್ಬಿಸಿರಿ ಪಾಂಡಿತ್ಯವ!!

    ಪ್ರತ್ಯುತ್ತರಅಳಿಸಿ
  10. ಉಳಿದೆಲ್ಲ ವಾಚಕರೆ! ಕವಿತಾಪ್ರರೋಚಕರೆ!
    ಹಳಿಗೆ ಬನ್ನಿರಿ ನೀವು ಕೂಡ ಬೇಗ!
    ಗಳಿಗೆ ಬಾರದು ಮತ್ತೆ, ಕಾವ್ಯಕನ್ಯಕೆ ನಿಮಗೆ
    ತಳಿಗೆ ಹಿಡಿದಾಗಮಿಸುತಿರುವಳೀಗ!!

    ಸಂಕೋಚವನ್ನುಳಿದು ಸುಮ್ಮಾನದಿಂ ಬನ್ನಿ
    ಶಂಕೆ ಬೆಂಕಿಯ ಹಾಗೆ ಕಾಡದಿರಲಿ
    ಸಂಕಲ್ಪಿಸಿರಿ ಸೊಗಸುಗವಿತೆಯನ್ನೊರೆಯಲ್ಕೆ
    ಸಂಕ ಮುರಿದಲ್ಲಿಯೇ ಸ್ನಾನವಲ್ತೆ!!

    ಪ್ರತ್ಯುತ್ತರಅಳಿಸಿ
  11. ಭಯದ ಕಾನನದಲ್ಲಿ ಕತ್ತಲಿನ ಮಡುವಿನಲಿ
    ಧರಣಿ ವಿರಹದಿ ರವಿಯ ಕಾಯುತಿಹಳು |
    ಗಗನದಲ್ಲಿಹ ಸಖಿಯರವಳನ್ನು ಕರೆದಿಹರು
    ಸಂಧಿ ಸಮಯವು ಸನಿಹ ಬಂದದ್ದನರಿತು ||

    ಮಣಿಗಳಿಂ ಶೋಭಿಸುವ ಹಸಿರು ಸೀರೆಯನುಟ್ಟು
    ನೀರೆಯಾಗಿರಲು ನವ ಅಭಿಸಾರಿಕೆ |
    ಬಿರಿದ ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳು
    ಹೆರಳ ಸಿಂಗರಿಸಿದವು ಬಲು ಚಂದದಿಂ ||

    ಮಂದಾರ ಸಂಪಿಗೆಯು ನೀಡಿರುವ ಕಂಪನ್ನು
    ತಂಗಾಳಿ ಹರಡಿತ್ತು ಮುದಗೊಳಿಸಲು |
    ಕವಿದ ಕತ್ತಲೆಯೆಲ್ಲ ದೂರ ಸರಿಯಿತು ಬೇಗ
    ನಲ್ಲನಪ್ಪುಗೆಯ ರಂಗು ಬೆಳಕಾಗಲು ||

    ಪ್ರತ್ಯುತ್ತರಅಳಿಸಿ
  12. ದೇಶ (ಅವನ ಹುಟ್ಟಿನ ದಿಕ್ಕಿನಿಂದಾಗಿ) ಕಾಲ (ದಿನದಾವರ್ತನದಿಂದಾಗಿ) ಸೂರ್ಯನಿಂದಾಗಿಯೇ ಮೂರ್ತವಾಗಿದೆ ಎನ್ನಲು ಪ್ರಯತ್ನಮಾಡಿದ್ದೇನೆ. (ತಿಮಿತ - "ಅಚಲ ಅಲುಗಾಡದ". ಇದಕ್ಕಿಂತ ಉತ್ತಮ ಪದ ಸಿಕ್ಕಲಿಲ್ಲ :( )

    ಅಮಿತವೀ ಕಾಲವನು ದಿನವಾಗಿ ತುಂಡರಿಸಿ
    ಸಮಯಚಕ್ರವನಿಂದು ನಡಿಸಿರ್ಪನ
    ತಿಮಿತವೀ ದೇಶವನು ದಿಕ್ಕಾಗಿ ವಿಂಗಡಿಸಿ
    ಸಮನಿಸಿಹನುದಯಕ್ಕೆ ಶರಣೆಂಬೆನಾ

    ಪ್ರತ್ಯುತ್ತರಅಳಿಸಿ
  13. ನತ್ತುಕಿವಿಯೋಲೆಗಳು ಚಿತ್ತಾಗಿ ಕಂಗೊಳಿಸೆ
    ಮುತ್ತುರತ್ನಗಳಾಗ ಶೃಂಗರಿಸಿರೆ
    ಮತ್ತೆ ನಯದರ್ಪಣವು ದರ್ಪದಿಂದಲಿ ಹೊಳೆಯೆ
    ಸುತ್ತುಜಗ ನಲಿಯುತಿದೆ ನಿನ್ನುದಯದಿ

    ಸುರಚಾಪ ಬಳುಕುತಲಿ ಹಿಮಕರನು ಬೆಮರುತಲಿ
    ಗಿರಿಯು ಮೈಬೆಚ್ಚಗನ್ನನುಭವಿಸುತ
    ಮರುತದೊರೆ ಮುಂಜಾವುಸಂಚಾರದಲಿ ತೊಡಗಿ
    ತರಣಿಯುತ್ಥಾನದಲಿ ಸಂಭ್ರಮಿಸಿರೆ

    (ಚಿತ್ತು = ಚೈತನ್ಯ, ತರಣಿ = ಸುರ್ಯ)
    (ನಿರ್ಜೀವ ಜಗತ್ತು ಸುರ್ಯೋದಯವನ್ನು ಅನುಭವಿಸುವ ಪರಿ)

    ಪ್ರತ್ಯುತ್ತರಅಳಿಸಿ
  14. ಹಿಮಕರ ಬಳಕೆ ತಪ್ಪಾಗಿದೆ. ಹಿಮಕರ = ಚಂದ್ರ. ಬದಲಿಗೆ,
    ಹಿಮವಂತ ಹಿಮನಗನು ಅಂತಾಗಿ ಬದಲಿಸಬಹುದು

    ಸುರಚಾಪ ಬಳುಕುತಲಿ ಹಿಮವಂತ ಬೆಮರುತಲಿ
    ಗಿರಿಯು ಮೈಬೆಚ್ಚಗನ್ನನುಭವಿಸುತ
    ಮರುತದೊರೆ ಮುಂಜಾವುಸಂಚಾರದಲಿ ತೊಡಗಿ
    ತರಣಿಯುತ್ಥಾನದಲಿ ಸಂಭ್ರಮಿಸಿವೆ

    ಪ್ರತ್ಯುತ್ತರಅಳಿಸಿ
  15. ಮುಂಜಾವುಸಂಚಾರ ಅರಿಸಮಾಸವಾಗುತ್ತದೆಯಾ?
    ಹೌದಾದರೆ, "ಮುಂಜಾವುನಡಿಗೆಯಲಿ ತಿರುತಿರುಗಿ" ಅಂಬುದಾಗಿ ಹೇಳಬಹುದು.

    ಪ್ರತ್ಯುತ್ತರಅಳಿಸಿ
  16. ಶತಾವಧಾನಿ ಗಣೇಶರಲ್ಲಿ ನನ್ನದೊಂದು ವಿನಂತಿ. ವಾಚಕರೆಲ್ಲರೂ ಹಳಿಗೆ ಬರಬೇಕೆಂದರೆ ಕಾವ್ಯ ಪ್ರಕಾರಗಳ ಬಗ್ಗೆ ಪಾಮರರಿಗಾಗಿ ನಿಮ್ಮ ಆರ್ಧ್ವರ್ಯದಲ್ಲಿ ಲೇಖನ ಸರಣಿಯೊಂದನ್ನು ಕೈಗೊಳ್ಳುವಂತೆ ಮಾಡಿ.

    ಪ್ರತ್ಯುತ್ತರಅಳಿಸಿ
  17. ಮನದ ಯೋಚನೆಗಳೈದೈದಾಗಿ ನಡೆಸುತ್ತ
    ಲನುಸರಿಸೆ ಚೌಪದಿಯು ಸಿದ್ದವೇನೆ
    ತನನನನ ತನನಾನ ತಾನಂತ ತಾನಾನ
    ತನನನಾ ತಂತಾನ ತಂತನನನ

    ಪ್ರತ್ಯುತ್ತರಅಳಿಸಿ
  18. ಕಾಲಕಾಲದ ಬಳಿಕ ಸೇರಿರುವ ವಿರಹಿಗಳು,
    ಸಾಲಿಗನು ಗಡುವನ್ನು ನೆನೆಯುತ್ತಲಿ
    ಆಲಸಿಯು ಹೊರಳುತ್ತ, ಕಾಲ್ಸೆಂಟರುದ್ಯೋಗಿ
    ಬಾಲರವಿರೇಖೆಗಳ ಶಪಿಸುತ್ತಿರೆ

    ಪ್ರತ್ಯುತ್ತರಅಳಿಸಿ
  19. ಬಾಲಕವಿ ತಿಂಡಿಪೋತನ ಕೇಳೆ, ವರ್ಣಿಸಿದ
    ಬಾಲರವಿಯುದಯ -ಟಿ.ಪಿ.ಕೈಲಾಸವಾಣಿ
    "ತೇಲುತಿಹ ಕೇಸರೀಭಾತೊ ಮಜ್ಜಿಗೆಹುಳಿಯ
    ಮೇಲೆಂದ" ಮೆಲ್ಲುತ್ತ ಇಡ್ಲಿ-ವೊಡೆ-ಪಾಣಿ

    ಪ್ರತ್ಯುತ್ತರಅಳಿಸಿ
  20. ಸಮುನ್ನತ ಸಮುದಿತ ಪ್ರಖರ ತೀಕ್ಷ್ಣಾದಿ ಪದ
    ಕಮಲಗಳು ದೃಷ್ಟಾಂತಬಲವಿರದೆಯೇ
    ಕಮರಿರಲು, ರವಿಯುದಯಸಾಫಲ್ಯದಲ್ಲರಳಿ
    ಘಮಿಸುತ್ತಿವೆ ಪದಾರ್ಥ ಹಿರಿಮೆಯಲ್ಲಿ

    ಪ್ರತ್ಯುತ್ತರಅಳಿಸಿ
  21. ಶ್ರೀ ರವೀಂದ್ರರ ಪದ್ಯದಲ್ಲಿ, ಪದಗಳೆಂಬ ಕಮಲಗಳು
    ರವಿಯುದಯಸಾಫಲ್ಯದಲ್ಲರಳಿ ಅರ್ಥದ ಹಿರಿಮೆ ಪಡೆಯುವುದರ ಕಲ್ಪನೆ ಚೆನ್ನಾಗಿದೆ.

    ಚೌಪದಿಯ ರಚನಗೆ ನಾನಾರೀತಿಯ ಸಾಧ್ಯತೆಗಳಿವೆ. ತಧೀಂತನ(ಲಗುಲಲ)ದ ಐದು ಮಾತ್ರೆಗಳ ಬಳಕೆಯೂ ನವೋದಯಸಾಹಿತ್ಯದಲ್ಲಿ ಆಗಿದೆ. ಈ ಜಗಣ (ಲಘು-ಗುರು-ಲಘು), ಕೆಲವು ಕ್ರಿಯಾತ್ಮಕ ವರ್ಣನೆಗೆ ಹೂಂದಿಕೊಂಡರೂ (ಉದಾ:ದಡಕ್ಕೆ ಹೊಮ್ಮಿಸಿ) ಕೇಳ್ಮೆಗೆ ಅಹಿತವಾಗಿರುವುದರಿಂದ ಅದರ ಬಳಕೆ ಕಡಿಮೆ. ಪ್ರಸ್ತುತ ಶ್ರೀಗಣೇಶರು ಸೂಚಿಸಿರುವ ಬಂಧವನ್ನು ಅನುಸರಿಸುವಾಗ, ಇದನ್ನು ಗಮನಿಸಬೇಕಿದೆ. ಈ ಹಿನ್ನೆಲೆಯಲ್ಲಿ, ರವೀಂದ್ರರ ಪದ್ಯಚ್ಛಂದ ಮೊದಲ ಹಾಗೂ ಕೊನೆಯ ಸಾಲುಗಳಲ್ಲಿ ಸ್ವಲ್ಪ ಸವರಣೆಬಯಸುತ್ತದೆ. ಸಮುನ್ನತದ ಜಗಣಗರ್ಭಹೋಗಬೇಕು. ಘಮಿಸುತ್ತಿ - ವೆಪದಾರ್ಥ - ಹಿರಿಮೆಯಲ್ಲಿ ಇದನ್ನೂ ಗಣಾರ್ಥಬಂಧಮಾಡಬಹುದು.
    ಸಮಲಂಕರಣವಿರದ... ಘಮಿಸುತಿವೆಪದಗಳರ್ಥವಧರಿಸುತ ಈರೀತಿ ಪ್ರಯತ್ನಿಸಬಹುದು.

    ಪ್ರತ್ಯುತ್ತರಅಳಿಸಿ
  22. ಚಂದ್ರಮೌಳಿಯವರೆ, ಧನ್ಯವಾದಗಳು. "ಸಮುನ್ನತ" ಎನ್ನುವುದು ಆದಿಪ್ರಾಸವನ್ನೂ ಭಂಗಿಸುತ್ತಿದೆ. ಕೊನೆಯ ಸಾಲು ಮಾಡಿದಾಗಲೇ, ಹಳಿ ಕ್ರಾಸಿಂಗ್ನಲ್ಲಿ ಕೂತಂತೆ ಆಗಿತ್ತು. ನೀವು ತೋರಿಸಿದ್ದು ಚೆನ್ನಾಯಿತು. ಸ್ವಲ್ಪ ಬದಲಿಸುವ ಪ್ರಯತ್ನ ಮಾಡಿದ್ದೇನೆ.

    ಸಮದರ್ಶಿ ಸಮುದಿತ ಪ್ರಖರ ತೀಕ್ಷ್ಣಾದಿ ಪದ
    ಕಮಲಗಳು ದೃಷ್ಟಾಂತಬಲವಿಲ್ಲದೇ
    ಕಮರಿರಲು, ರವಿಯುದಯಸಾಫಲ್ಯದಲ್ಲರಳಿ
    ಘಮಿಸುತಿವೆ ಪದಸಾರ್ಥ ಗಾಂಭೀರ್ಯದಿ

    ಪ್ರತ್ಯುತ್ತರಅಳಿಸಿ
  23. ಸೂಚನೆಯ ಭಾವಸೂಕ್ಷ್ಮವ ಗ್ರಹಿಸಿ ನಿರ್ವಹಿಸಿ
    ಯೋಚನಾಕ್ರಮಗಳನು ಸವರಣಿಸೆ ಶಿಲ್ಪ
    ಆಚರಿಸಿತೋರ್ಪಡಿಪ ವೈಚಾರಿಕತೆಯಿದುವೆ
    ಸೈ ಚತುರ ಶ್ರೀರವಿಂದ್ರರ ನುಡಿಯನಲ್ಪ

    ಪ್ರತ್ಯುತ್ತರಅಳಿಸಿ
  24. ಶ್ರೀಮತಿ ಕಾಂಚನರವರ ಪದ್ಯಗಳಲ್ಲಿ, ಪದಸೌಕುಮಾರ್ಯ ಭೂರಮಣಿಯ ಸಹಜಾಲಂಕಾರ, ಪ್ರಿಯಸಂಗಮಾತುರದ ಭಾವಗಳು ಚೆನ್ನಾಗಿ, ಚೌಪದಿಯ ಹರಿವು ಸುಗಮವಾಗಿದೆ. ಒಂದೆರಡು ಸಲಹೆಗಳು.

    ಸಂಧಿ ಸಮಯವು ಸನಿಹ ಬಂದದ್ದನರಿತು || ಇದನ್ನು ’ಸಂಧಿ ಸಮಯವು ಬಳಿಗೆಸಾರಲರಿತು’ ಹೀಗೆ ಮಾಡಿದರೆ ಎರಡನೆಯಸಾಲಿನಂತೆ, ೫+೫+೫+ಗುರು ಕೂಡಿ ಹೊಂದಿಕೆಯಾಗುತ್ತದೆ.

    ನಲ್ಲನಪ್ಪುಗೆಯ ರಂಗು ಬೆಳಕಾಗಲು || ಇಲ್ಲಿ ೫ರ ಗಣವಿಭಜನೆಯನ್ನು ಸಾಧಿಸುವುದು ಕಷ್ಟ. ನಲ್ಲನ - ಪ್ಪುಗೆಯರಂ - ಗುಬೆಳಕಾ - ಗಲು ಹೀಗೆ ತೊಡಕಾಗುತ್ತದೆ. ಸರಿಪಡಿಸುವುದು ಬಹಳ ಸುಲಭ. ’ಯ’ ತೆಗೆದರೆ ಸರಿ. ನಲ್ಲನ-ಪ್ಪುಗೆ ರಂಗು- ಬೆಳಕಾಗ-ಲು.

    ವಂದನೆಗಳು

    ಪ್ರತ್ಯುತ್ತರಅಳಿಸಿ
  25. ಚಂದ್ರಮೌಳಿಯವರೆ - ನಿಮ್ಮ ಮೆಚ್ಚುಗೆ ಹಾಗು ಸಲಹೆಗಳಿಗೆ ಧನ್ಯವಾದಗಳು. ಸರಿಮಾಡಿದ ಪದ್ಯಗಳು ಹೀಗಿವೆ :

    ಭಯದ ಕಾನನದಲ್ಲಿ ಕತ್ತಲಿನ ಮಡುವಿನಲಿ
    ಧರಣಿ ವಿರಹದಿ ರವಿಯ ಕಾಯುತಿಹಳು |
    ಗಗನದಲ್ಲಿಹ ಸಖಿಯರವಳನ್ನು ಕರೆದಿಹರು
    ಸಂಧಿ ಸಮಯವು ಬಳಿಗೆಸಾರಲರಿತು ||

    ಮಣಿಗಳಿಂ ಶೋಭಿಸುವ ಹಸಿರು ಸೀರೆಯನುಟ್ಟು
    ನೀರೆಯಾಗಿರಲು ನವ ಅಭಿಸಾರಿಕೆ |
    ಬಿರಿದ ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳು
    ಹೆರಳ ಸಿಂಗರಿಸಿದವು ಬಲು ಚಂದದಿಂ ||

    ಮಂದಾರ ಸಂಪಿಗೆಯು ನೀಡಿರುವ ಕಂಪನ್ನು
    ತಂಗಾಳಿ ಹರಡಿತ್ತು ಮುದಗೊಳಿಸಲು |
    ಕವಿದ ಕತ್ತಲೆಯೆಲ್ಲ ದೂರ ಸರಿಯಿತು ಬೇಗ
    ನಲ್ಲನಪ್ಪುಗೆ ರಂಗು ಬೆಳಕಾಗಲು ||

    ಪ್ರತ್ಯುತ್ತರಅಳಿಸಿ
  26. Hello ChandraMouliyavare,

    I think in GaNa vibhajane is correct. - nallanap (5) - ugeyaram(5) - gubeLakaa(5).
    Also in the first place, i think it can differ in the last gaNa in choupadi right? as it is kind of free(blank) meter which we need to stretch without actual letters.
    let me know your comment.

    ಪ್ರತ್ಯುತ್ತರಅಳಿಸಿ
  27. Dear Shreesha,

    in nallanap (5) - ugeyaram(5) - gubeLakaa(5, ganavibhajane is tough and not impossible. The point is that cutting of each word to the size of 5 matras loses its meaning and hence suggested the correction.Other wise any prose can be converted in to pachamatra gana with 'stretching' as you said. When it becomes 'nallanap-pugerangu' 'belakutara-lu' - one can feel the flow of panchamatragana. What is stretchable in choupadi is the last letter at the end of second and last line. Stretching without actual letters happens in 'amshaganachhaMda' such as tripadi, Ele, saMgatya or tEtageethi. This is my 10 paise knowledge of prosody..

    ಪ್ರತ್ಯುತ್ತರಅಳಿಸಿ
  28. ahhhh....its my mistake....i read - kashTa - as not possible and hence the post....
    I totally agree with aesthetic constraints of meters you have explained and i was just showing mathematical possibility thinking that, you were mentioning it as impossible to make panchamatragana out of the earlier words of Sri Kanchana....

    Is your currency is INR or something Different ??
    your 10 Paise has lot more value than us...so confused :-)

    ಪ್ರತ್ಯುತ್ತರಅಳಿಸಿ
  29. ಚಂದ್ರಮೌಳಿಯವರೇ, ಧನ್ಯವಾದಗಳು. ಸವರಣಿಸಿದ್ದೇನೋ ಆಯ್ತು. ಆದರೂ, ಓದಿದರೆ, ಗದ್ಯ ಓದಿದಂತೇ ಅನಿಸುತ್ತಿದೆ. ಬಹುಶಃ "ಕಮರಿರಲು" ೩ನೇ ಸಾಲಿಗೆ ಹೋಗಿದ್ದು ಒಂದು ಕಾರಣ. ೪ನೇ ಸಾಲಿನಲ್ಲಿಯೂ "ಘಮಿಸುತಿವೆ" ಬಂದು ಆಮೇಲೆ "ಪದಸಾರ್ಥ ಗಾಂಭೀರ್ಯದಿ" ಎಂದು ಬಂದದ್ದು, ಪೂರ್ಣವಿರಾಮವನ್ನಳಿಸಿ ಅರ್ಧವಿರಾಮ ಹಾಕಿದಂತೆನಿಸುತ್ತಿದೆ. ಒಂದಿಷ್ಟು ಪದಕೋಶ ಮಗುಚಿಹಾಕಿದ್ದಷ್ಟೇ ಲಾಭ :)

    ಪ್ರತ್ಯುತ್ತರಅಳಿಸಿ