ಭಾನುವಾರ, ಸೆಪ್ಟೆಂಬರ್ 11, 2011

ಸಮಸ್ಯೆ: ರಾಮಗಾಗದ ಕಾರ್ಯ ಕಪಿಗಳಗುಂಪಿಗತಿ ಸುಲಭ

ಸ್ನೇಹಿತರೆ,

ಇನ್ನೊಂದು ಸಮಸ್ಯೆ :)

ರಾಮಗಾಗದ ಕಾರ್ಯ ಕಪಿಗಳಗುಂಪಿಗತಿಸುಲಭ

14 ಕಾಮೆಂಟ್‌ಗಳು:

  1. ಭೂಮಿಜೆಯ ಹುಡುಕುತಲಿತಾಶ್ರೀ
    ರಾಮ ನಡೆದಿರೆ ದಟ್ಟವನದೊಳು
    ಸೀಮೆ ಮಹಿಮೆಯೊ ಹೇನು ಬೆಳೆಯುತ ತಲೆಯು ತುರಿಸಿತತೀ |
    ರೋಮಗಳ ನಡುಹುಡುಕಿ ಕಪಿಗಳ-
    ಹ೦ಮಿನಲಿಯದನುಣ್ಣಲನಿಸಿತು
    ರಾಮಗಾಗದ ಕಾರ್ಯ ಕಪಿಗಳ ಗು೦ಪಿಗತಿಸುಲಭ ||

    ಪ್ರತ್ಯುತ್ತರಅಳಿಸಿ
  2. ಶ್ರೀಶ, ಭರ್ಜರಿ entry :)

    ಕಾಮುಕಾರಿಯ ಬರವ ನೋಡಲು
    ತಾಮರಸಮುಖಿ ಬಹಳ ದುಃಖಿಸೆ
    ಪ್ರೇಮದರಸಿಯ ರಮಿಸಲಾಗದೆ ವಾನರರ ನೋಡೆ
    ನೇಮವಿಲ್ಲದ ಮಂಗಚೇಷ್ಟೆಗೆ
    ಭಾಮಿನಿಯು ನಗಲೇನಿದಚ್ಚರಿ
    ರಾಮಗಾಗದ ಕಾರ್ಯ ಕಪಿಗಳ ಗುಂಪಿಗತಿ ಸುಲಭ
    ತಾಮರಸ = ಕಮಲ

    ಪ್ರತ್ಯುತ್ತರಅಳಿಸಿ
  3. ರಾಮ ರಾವಣನನ್ನು ಗೆದ್ದು ಸೀತೆಯನ್ನು ನೋಡಲು ಬಂದ ಸಂದರ್ಭದಲ್ಲಿನ ಕಲ್ಪನೆ.

    ಪ್ರತ್ಯುತ್ತರಅಳಿಸಿ
  4. ಆ ಮಹಾಸಾಗರವ ದಾಟಲು
    ಸೀಮೆಗಳನೊಂದಾಗಿ ಕೂಡಲು
    ಪ್ರೇಮದಿಂ ಕೈಜೋಡಿಸಿದರಾ ನರರ ಪೂರ್ವಜರು |
    ರಾಮನೆಸರಲಿ ಕಟ್ಟಿದರು ರಸ -
    ನಾಮದಾ ಕಲ್ಗಳಲಿ ಸೇತುವ
    ರಾಮಗಾಗದ ಕಾರ್ಯ ಕಪಿಗಳ ಗುಂಪಿಗತಿ ಸುಲಭ ||

    ಪ್ರತ್ಯುತ್ತರಅಳಿಸಿ
  5. ಶ್ರೀಶ, ಹೊಳ್ಳ,

    ನಿಮ್ಮ ಪೂರಣಗಳು ಬಹಳ ಚೆನ್ನಾಗಿವೆ :)

    ರಾಮ್,
    ನಾನು ನಿಮ್ಮ ಪರಿಹಾರದ ದಾರಿಯನ್ನು ಹಿಡಿದಿದ್ದೇನೆ :)

    ಭಾಮಿನಿಯನರಸುತಿಹ ರಘುಕುಲ-
    ಸೋಮನಚ್ಚರಿಗೊಂಡ ಕಾಣಲು
    ನಾಮ ಬರೆದಿಹ ಬಂಡೆಗಳುದಧಿಯಲ್ಲಿ ತೇಲುತಿರೆ
    ನೇಮವೆನೆ ದೊರೆ ಕರವ ಚಾಚುತ
    ಭೀಮಶಿಲೆಯಿಡೆ ಮುಳುಗುತಿರಲದು
    ರಾಮಗಾಗದ ಕಾರ್ಯ ಕಪಿಗಳ ಗುಂಪಿಗತಿ ಸುಲಭ

    ಪ್ರತ್ಯುತ್ತರಅಳಿಸಿ
  6. when i looked at "kapigaLa gumpigati sulabha" the first action that came to my mind is their mastery in "hen picking" and hence the pooraNa :-)

    you guys are really rocking....
    will give a kanda by this weekend....

    ಪ್ರತ್ಯುತ್ತರಅಳಿಸಿ
  7. ಶ್ರೀಶರಲ್ಲಿ ಸವಿನೋದವಾಗಿ:
    ಅಕಟಕಟಾ ಬೀಭತ್ಸಂ
    ಪ್ರಕಟಸಮಸ್ಯಾಪರೀಹೃತಿವಿಧಾನಂ ಕೇಳ್
    ಸುಕವಿ! ಶ್ರೀಶ!ಇದೇಂ ಗತಿ?
    ವಿಕಟಂ ಗಡ ನಿನ್ನ ದಾರಿ ಕಪಿಗೇ ಪ್ರಿಯಮಯ್!!
    ಹೊಳ್ಳರ ಪದ್ಯಬಂಧ ಚೆಲುವಾಗಿದೆ, ಪದಪದ್ಧತಿಯೂ ಸೊಗಸಾಗಿದೆ; ರಾಮಚಂದ್ರ ಹಾಗೂ ಸೋಮರ ಪರಿಹಾರಗಳೂ ಚೆನ್ನಾಗಿವೆ.
    ಆದರೆ ರಾಮಚಂದ್ರರ ಪರಿಹಾರದಲ್ಲಿ ’ರಾಮನೆಸರ..” ಎಂಬ ಪ್ರಯೋಗಕ್ಕಿಂತ ರಾಮವೆಸರ....ಎನ್ನುವ ಮತ್ತೂ ಉತ್ತಮವಾದ ಶಬ್ದರೂಪವನ್ನು ಬಳಸಬಹುದು.

    ಬರಿಯ ಭಾಮಿನಿಯಲ್ಲಿ ಸಾಗು-
    ತ್ತಿರುವ ಕಾವ್ಯಕುತೂಹಲದಿ ಜನ
    ತೊರೆವರೇನೋ ಕುತುಕವನ್ನೆನುತೆನಗೆ ಸಂದೇಹ
    ಸ್ಫುರಿಸಿತೀಗಳೆ ನಿಮ್ಮ ಜಾಣ್ಮೆಯು
    ತರದೆ ಭಾಮಿನಿಯನ್ನು ನೋಡರು
    ತೆರೆಯನೂ ರಸಿಕರ್ಗಳಂತೆಯೆ ಗಡಿದು ’ಐಟಮ್ ಸಾಂಗ್"!!

    ಈ ಕಾರಣದಿಂದ ನಾನೇ ಒಂದು ವಸ್ತುವನ್ನು ಕೊಡುತ್ತಿದ್ದೇನೆ.
    ಪಂಚಮಾತ್ರಾಗಣದ ಚೌಪದಿಯಲ್ಲಿ ಮುಂಜಾನೆಯ ಬಣ್ಣನೆಯಾಗಬೇಕು. ಎಷ್ಟು ಪದ್ಯಗಳಾದರೂ ಸರಿ, ಹೊಸ ಹೊಸ ಕಲ್ಪನೆಗಳಿಂದ ಕೂಡಿರಬೇಕೆಂಬುದೇ ಮುಖ್ಯನಿಯಮ.
    ಮೊದಲಿಗೆ ನನ್ನ ಪದ್ಯದಿಂದಲೇ ಆರಂಭ; charity begins at home ಎಂದು ಗಾದೆಯಲ್ಲವೆ!

    ಹಾಡುಹಕ್ಕಿಗಳೋಳಿ ಗುರು-ಲಘುಗಳಂತಾಗೆ
    ಮೂಡುವೆಣ್ಣಿನ ಕೆಂಪು ರಸವಾಗಿರೆ
    ಮೋಡಿಮಾಡುವ ಮಲರಲಂಕೃತಿಗಳೆನಿಸಿರಲು
    ನೋಡಿ ನಸುಕಿನ ಕವನ ನವನವೀನ

    ಪ್ರತ್ಯುತ್ತರಅಳಿಸಿ
  8. ಗಣೇಶರ ಸೂಚನೆಗೆ ಧನ್ಯವಾದಗಳು. ಸರಿಮಾಡಿದ ಪದ್ಯ ಇಂತಿದೆ ::
    ಆ ಮಹಾಸಾಗರವ ದಾಟಲು
    ಸೀಮೆಗಳನೊಂದಾಗಿ ಕೂಡಲು
    ಪ್ರೇಮದಿಂ ಕೈಜೋಡಿಸಿದರಾ ನರರ ಪೂರ್ವಜರು |
    ರಾಮವೆಸರಲಿ ಕಟ್ಟಿದರು ರಸ -
    ನಾಮದಾ ಕಲ್ಗಳಲಿ ಸೇತುವ
    ರಾಮಗಾಗದ ಕಾರ್ಯ ಕಪಿಗಳ ಗುಂಪಿಗತಿ ಸುಲಭ ||

    ಪ್ರತ್ಯುತ್ತರಅಳಿಸಿ
  9. ಗಣೇಶರ ಸಮಸ್ಯೆಯನ್ನು ಹೊಸ ಬ್ಲಾಗಾಗಿ ಹಾಕಿದ್ದೇನೆ. ನಿಮ್ಮ ಮುಂಜಾನೆಗಳು ಅದರಡಿಯಲ್ಲೇ ಉದಯಿಸಲಿ.

    ಪ್ರತ್ಯುತ್ತರಅಳಿಸಿ
  10. ಹಹಹಹಹಹಹ....
    ಕಲ್ಪನಾ ಕಾ ದರಿದ್ರತಾ ಅ೦ದ್ರೆ....ಇದನ್ನ ತೋರುಸ್ಬೋದು :-)
    ಆದ್ರು ಕೆಳಕ೦ಡ +ಪಾಯಿ೦ಟ್ ಗಳನ್ನು ಗಮನಿಸಬೇಕು.
    ೧. ಇಲ್ಲಿ ವ್ಯಾಜಸ್ತುತಿಯಲ೦ಕಾರದ ವಿಶೇಷ ಬಳಕೆಯಿದೆ. ರಾಮನು ಕಪಿಗಳೆದುರಲ್ಲಿ ಸೋಲುವುದೆ೦ದರೆ ಅದು ಹೇನುಹುಡುಕುವುದರಲ್ಲಿ ಮಾತ್ರ. ಹಾಗಾಗಿ ರಾಮನ ಹಿರಿಮೆಯು ಇಲ್ಲಿ ಕಾಪಾಡಲ್ಪಟ್ಟಿದೆ
    ೨. ಅ೦ತೆಯೇ ರಾಮನ ತಲೆಯಲ್ಲಿ ಹೇನು ಹುಟ್ಟಿಸಲು, ಅವನನ್ನು ಜನಸಾಮಾನ್ಯರ೦ತೆ ಕಾಣುವ ನಿಸ್ಪೃಹದೃಷ್ಟಿಯಿ೦ದ ಮಾತ್ರ ಸಾಧ್ಯ. ಹೀಗೆ ರಾಮನನ್ನು ನಮ್ಮೊಳಗೆನಮ್ಮವನಾಗಿಯೇ Realistic Plain ನಲ್ಲಿ ಚಿತ್ರಿಸಿದ್ದು, ಸೀತೆಯನ್ನು ಕಳೆದುಕೊ೦ಡಾಗಿನ ಅವನ ವಿರಾಗಿ ಮನಸ್ಸನ್ನು ಔಚಿತ್ಯಪೂರ್ಣವಾಗಿ ಚಿತ್ರಿಸಿದೆ...
    ಇತಿ ಸ್ವವಿಮರ್ಶೆ ಸಮಾಪ್ತಮ್ :-)

    ಪ್ರತ್ಯುತ್ತರಅಳಿಸಿ
  11. ಶ್ರೀಶ - ವಿನೋದಕ್ಕೆ ಒಂದು technical ಪ್ರಶ್ನೆ :: ರಾಮ ಲಕ್ಷ್ಮಣರಿಬ್ಬರೂ ವನವಾಸ ಶುರುವಾದಾಗ, ತಲೆಗೂದಲಿಗೆ ಯಾವುದೋ ಮರದ ಅಂಟನ್ನು ಲೇಪಿಸಿಕೊಂಡು ಜಟೆ ಕಟ್ಟಿಕೊಂಡರು. ಅದು ಮರಳಿ ಅಯೋದ್ಯೆಗೆ ಬಂದನಂತರವೇ ತೆಗೆದರೆಂದು ನನ್ನ ತಿಳುವಳಿಕೆ. ಹೀಗಿದ್ದಾಗ್ಯೂ ಹೇನಾಗುವುದೇ? ಆದಲ್ಲಿ, ಕಪಿಗಳು ರೊಮಗಳ ಮಧ್ಯೆ ಹುಡುಕಿ ಅವನ್ನು ತೆಗೆಯಲು ಸಮರ್ಥವೇ? ಇಲ್ಲವಾದಲ್ಲಿ, ನಿಮ್ಮ ಪದ್ಯದಲ್ಲಿ ಯಾವುದಾದರೂ‌ (technical) ದೋಷವಿದೆಯೇ?
    :-)

    ಪ್ರತ್ಯುತ್ತರಅಳಿಸಿ
  12. ಒಮ್ಮೆ ಅಕ್ಬರ್ ಬಾದಷಹನನ್ನು ಹೊಗಳುವ ಬರದಲ್ಲಿ ಅವನ ಆಸ್ಥಾನ ವಿದೂಷಕರು ಅವನನ್ನು ದೇವರಿಗಿಂತಲೂ ದೊಡ್ಡವನೆಂದು ಹೇಳಿಬಿಟ್ಟರು. ಹೊಗಳಿಕೆಗೆ ಉಬ್ಬುವುದು ಎಷ್ಟೇ ಸಹಜವಾದರೂ ತಾನು ದೇವರಿಗಿಂತ ದೊಡ್ಡವನು ಎಂದದ್ದು ಅಕ್ಬರನಿಗೆ ಸರಿತೋರದೆ ಆ ಭಟ್ಟಂಗಿಗಳ ಮೇಲೆ ಕೋಪಗೊಂಡ. ಆಗ ಆ ಭಟ್ಟಂಗಿಗಳು ತಮ್ಮನ್ನು ಕಾಪಾಡುವಂತೆ ಬೀರಬಲ್ಲನ ಮೊರೆ ಹೊಕ್ಕರು. ಆಗ ಬೀರಬಲ್ಲ ಬಹಳ ಚಾಣಾಕ್ಷತನದಿಂದ ಆ ಸಮಸ್ಯೆಯನ್ನು ಪರಿಹರಿಸಿದ. ಜಹಪಾನ ಅವರು ಹೇಳಿದ್ದು ಸರಿ, ನೀವು ಬೇಕಾದರೆ ಯಾರನ್ನಾದರೂ ನಿಮ್ಮ ರಾಜ್ಯದಿಂದ ಗಡೀಪಾರು ಮಾಡಬಹುದು ಆದರೆ ಪ್ರಪಂಚವೆಲ್ಲಾ ಅವನ ಸಾಮ್ರಾಜ್ಯವೇ ಆದ್ದರಿಂದ ದೇವರು ಈ ಕೆಲಸವನ್ನು ಮಾಡಲಾರ. ಆದ್ದರಿಂದ ನೀವೇ ದೊಡ್ಡವರೆಂದು ಬೀರಬಲ್ ಆ ಸಮಸ್ಯೆಯನ್ನು ಬಗೆಹರಿಸಿದ. ಸೋಮರವರ "ರಾಮಗಾಗದ ಕಾರ್ಯ ಕಪಿಗಳ ಗುಂಪಿಗತಿಸುಲಭ" ಎನ್ನುವ ಸಮಸ್ಯೆಯನ್ನು ನೋಡಿದಾಗ ಇದನ್ನು ಹೇಗೆ ಪರಿಹರಿಸುತ್ತಾರೋ ನೋಡೋಣವೆಂಬ ಕುತೂಹಲವಿತ್ತು. ಕಾವ್ಯ-ಕುತೂಹಲ ಬಳಗದಲ್ಲಿ ಅನೇಕ ಬೀರಬಲ್ಲರು ಬಹಳ ಸುಂದರವಾಗಿ ಸಮಸ್ಯೆಯನ್ನು ಪೂರಣ ಮಾಡಿದ್ದಾರೆ ಅವರೆಲ್ಲರಿಗೂ ನನ್ನ ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  13. ಶ್ರೀಶ ಅವರಿಗೆ:
    ಕವಿತೆಯೊಳ್ ಕಳೆದುದನಲಂಕಾರಶಾಸ್ತ್ರದೊಳ್
    ಸವಿಯೊಸರುವಂದದಿಂ ಪಡೆದ ಜಾಣ್ಮೆ
    ನವನವೋನ್ಮೇಷಶಾಲಿನಿಯಪ್ಪ ಪ್ರತಿಭೆಗಂ
    ಸವನೆನಿಸಿದಂತಾಯ್ತು!ಇದುವೆ ಕಾಣ್ಮೆ!!

    ಪ್ರತ್ಯುತ್ತರಅಳಿಸಿ