ಬುಧವಾರ, ಆಗಸ್ಟ್ 24, 2011

ಪದ್ಯರಚನೆಗೆ ಕೈಪಳಗಲು ಮತ್ತೊಂದು ಸಮಸ್ಯೆ: ಭಾಮಿನೀ ಛಂದ

"ನಿನನು ನಿನ್ನನು ನಿನ್ನ ನಿನ್ನನು ನಿನ್ನ ನಿನ್ನನ್ನು" (ಕೊನೆಯ ಸಾಲು)

ಶ್ರೀಶ ರಾಮ ಸೋಮ ಕಾಂಚನೇತರರೂ ಸಹ ಮೊದಲಿಡಬಹುದು

14 ಕಾಮೆಂಟ್‌ಗಳು:

  1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  2. ಜಾತಿ ಮತ್ತು ವೃತ್ತ ಛಂದಃಪ್ರಕಾರಗಳ ಬಗ್ಗೆ

    ಮನನ 'ವೃತ್ತ'ವು ಮಾತ್ರೆ ಎಣಿಸದೆ
    ನೆನೆಯಬೇಕಕ್ಷರದನುಕ್ರಮ
    "ನಾನ ನಾನಾ ನನಾ ನನನನ ನಾನ ನಾನಾನ"
    ಎಣಿಸಲಿಪ್ಪತ್ತೆರಡು ಮಾತ್ರೆಗ-
    ಳನು ಸುಲಭವತಿ 'ಜಾತಿ' ಕಲಿಕೆಯು
    "ನಿನನು ನಿನ್ನನು ನಿನ್ನ ನಿನ್ನನು ನಿನ್ನ ನಿನ್ನನ್ನು"

    ಪ್ರತ್ಯುತ್ತರಅಳಿಸಿ
  3. ಮನಸು ಖಳರದು ಕೃಪೆಯು ಪರರಿಂ
    ಸನಿಹ ಬರುತಿರೆ ಕೂಗಿ ಕರೆವುದು
    "ನನದು ನನದದು ನನ್ನದೇ ಅದು ನನ್ನ ನನ್ನದದು"
    ವಿನತಿ ಪರರಿಂ ಕೇಳಿದಾಕ್ಷಣ
    ಮುನಿಸಿ ಜಾರುತ ಪರರ ತೋರ್ಪುದು
    "ನಿನನು ನಿನ್ನನು ನಿನ್ನ ನಿನ್ನನು ನಿನ್ನ ನಿನ್ನನ್ನು"

    ಪ್ರತ್ಯುತ್ತರಅಳಿಸಿ
  4. ಸನಿಯ ಬಂದೊಡನಾಡುತಲಿಯವ -
    ಳಿನಿಯನೊಡೆ ಮೈ ಮಸೆದು ಕೇಳ್ದಳು
    ಮನಸು ನಿನ್ನದದಾರ ಬಯಸುವುದೇಳು ಜನ್ಮದಲು |
    ಮನವು ತನುವಿನಲೈಕ್ಯವಾಗುತ -
    ಲೊಡನೆ ಪೇಳ್ದನದೆಂದು ನಿನ್ನನೆ
    ನಿನನು ನಿನ್ನನು ನಿನ್ನ ನಿನ್ನನು ನಿನ್ನ ನಿನ್ನನ್ನು ||

    ಪ್ರತ್ಯುತ್ತರಅಳಿಸಿ
  5. ೫ನೇ ಸಾಲಿನಲ್ಲಿ ಆದಿಪ್ರಾಸ ತಪ್ಪಿಹೋಗಿದೆ. ಸರಿ ಮಾಡಿದ ಪದ್ಯ ::
    ಸನಿಯ ಬಂದೊಡನಾಡುತಲಿಯವ -
    ಳಿನಿಯನೊಡೆ ಮೈ ಮಸೆದು ಕೇಳ್ದಳು
    ಮನಸು ನಿನ್ನದದಾರ ಬಯಸುವುದೇಳು ಜನ್ಮದಲು |
    ಮನವು ತನುವಿನಲೈಕ್ಯವಾಗುತ -
    ಕನಲುತಲಿ ಪೇಳಿದನು ನಿನ್ನನೆ
    ನಿನನು ನಿನ್ನನು ನಿನ್ನ ನಿನ್ನನು ನಿನ್ನ ನಿನ್ನನ್ನು ||

    ಪ್ರತ್ಯುತ್ತರಅಳಿಸಿ
  6. ಬೇಂದ್ರೆ ಮಾಸ್ತರರು ಒಮ್ಮೆ ಪ್ರಾಸದ ಬಗ್ಗೆ ವಿವರಣೆ ಕೊಡುತ್ತಾ ಉದಾಹರಣೆಯಾಗಿ ಮೂರು ಪದಗಳನ್ನು: ಪ್ರಾಸ, ತ್ರಾಸ & ದಾಸ; ಕೊಟ್ಟು ಎಲ್ಲರಿಗೂ ಒಂದೊಂದು ಪ್ರಾಸ ರಚಿಸುವಂತೆ ಹೇಳಿದರಂತೆ. ಆಗ ಕ್ಲಾಸಿನಲ್ಲಿದ್ದ ತರಲೆ ಹುಡುಗನೊಬ್ಬ ಹೀಗೆ ಕಾವ್ಯ ರಚಿಸಿದನಂತೆ: "ಪ್ರಾಸ ಕಟ್ಟುವ ತ್ರಾಸ ನನಗೇತಕಯ್ಯ,
    ಹಾಡ ಹಾಡುವ ದಾಸ ನಾನೇಕೆ ಆಗಲಯ್ಯ"
    ಈ ಸಂಗತಿಯನ್ನು ನೆನೆಪಿಗೆ ತರುವಂತಿದೆ ಸೋಮರವರು ಪೂರೈಸಿದ ಮೊದಲ ಪದ್ಯ. ರಾಮಚಂದ್ರರವರ ಪದ್ಯವಂತೂ ಹಳೇ ಬೇರು ಹೊಸ ಚಿಗುರನ್ನು ಒಳಗೊಂಡಂತೆ ಹಳೆಯ ಶೈಲಿಗೆ ಮಾರ್ಡನ್ ಹೊದಿಕೆಯನ್ನೆಳೆದಿದ್ದಾರೆ. ಇದನ್ನು ಕೊಟ್ಟ ಪೃಚ್ಛಕರಾದ ಚಂದ್ರಮೌಳಿಯವರು ಈ ಸಮಸ್ಯೆಯನ್ನು ಹೇಗೆ ಬಿಡಿಸುತ್ತಾರೆಂದು ಎದುರು ನೋಡುತ್ತಿದ್ದೇನೆ.

    ಪ್ರತ್ಯುತ್ತರಅಳಿಸಿ
  7. ಮನದಿ ಚಕ್ರವ್ಯೂಹದಾವೃತ-
    ವನು ಹೊರಗಿನಿಂ ಒಳಗೆ ಭೇದಿಪ
    ನೆನಪ ಬಲದೊಳ್ ಮುಂದೆ ನುಗ್ಗಿದ ವೀರನಭಿಮನ್ಯು
    ಸೆಣೆಸಲಾರು ಮಹಾರಥಿಗಳನು
    ಮುನಿದು ಕೊಲ್ಲುವೆಯೆನುತ ನೋಡಿದ
    ನಿನನು, ನಿನ್ನನು, ನಿನ್ನ, ನಿನ್ನನು, ನಿನ್ನ, ನಿನ್ನನ್ನು

    ಪ್ರತ್ಯುತ್ತರಅಳಿಸಿ
  8. ವನಿತೆ ಹಸ್ತದಿ ಮಾಲೆ ಪಿಡಿದಿರೆ
    ಮನದೊಳುತ್ಸುಕ ರಾಜಕುವರರು
    ನನನೆ ಮೆಚ್ಚುವಳೆನುತ ಕನ್ಯೆಯ ನೋಡೆ ತವಕದಲಿ
    ಕನಸ ಗೆಳೆಯನ ಗುಣಗಳಿಲ್ಲದ-
    ವನೆನೆ ನೋಟದೆ ತೀರ್ಪನಿತ್ತಳು
    ನಿನನು, ನಿನ್ನನು, ನಿನ್ನ, ನಿನ್ನನು, ನಿನ್ನ, ನಿನ್ನನ್ನು

    ಪ್ರತ್ಯುತ್ತರಅಳಿಸಿ
  9. ವಿವಿಧ ವ್ಯಕ್ತಿ ಸೂಚಕತ್ವ ಸಂದರ್ಭ ಕಲ್ಪನೆಯೇ ಈ ಸಮಸ್ಯೆಯನ್ನು ಪೂರಿಸುವದಾರಿ. ಇದನ್ನು ರಾಮಚಂದ್ರ ಸೋಮಶೇಖರರಿಬ್ಬರೂ ಗ್ರಹಿಸಿ ಸಮರ್ಥವಾಗಿ ಪೂರಿಸಿದ್ದಾರೆ. ಈ ಪೂರಣ ಅವರ ಕೆಲವು ಪದ್ಯಗಳಿಗಿಂತ ಯಾವರೀತಿಯಿಂದಲೂ ಶ್ರೇಷ್ಠವಲ್ಲ.

    ಸಂದರ್ಭ: ಇಂದ್ರಜಿತ್ತಿನ ರಾತ್ರಿಯುದ್ಧಕ್ಕೆ ಕಪಿಸೇನೆ ತತ್ತರಿಸಿದೆ. ವಿಭೀಷಣ ಕೆಲವು ರಹಸ್ಯಗಳನ್ನು ತಿಳಿಸಿದಾಗ, ರಾಮ-ಸುಗ್ರೀವರು ಅದನ್ನುಕೇಳಿ, ಮುಖ್ಯ್ರರಿಗೂ ಅದನ್ನು ತಿಳಿಯಪಡಿಸಲು ಅವರನ್ನು ತಕ್ಷಣ ಬರಹೇಳುವ ಘಟ್ಟ.

    ದನುಜನನುಜನು ಪಗೆಯ ಗುಟ್ಟುಗ
    ಳೆನಿತೊ ತಿಳಿದವ ರಾತ್ರಿಯುದ್ಧಕ
    ದನುವಹುದು, ಶ್ರೀರಾಮನೀಕ್ಷಣವೆಲ್ಲರನು ಕರೆದ
    ಅನಿಲಭವ ನಳ ಗವಯ ವಾಲೀ
    ತನಯ ಪವನ ಗವಾಕ್ಷ ಜಾಂಬವ
    ನಿನನು ನಿನ್ನನು ನಿನ್ನ ನಿನ್ನನು ನಿನ್ನ ನಿನ್ನನ್ನು

    ಪ್ರತ್ಯುತ್ತರಅಳಿಸಿ
  10. ಅಭಿಮನ್ಯು ಸಂದರ್ಭದ ಹಾಗೂ‌ ರಾಮಾಯಣದ ಸಂದರ್ಭದ ಪದ್ಯಗಳು ಬಹಳ ಹಿಡಿಸಿದವು.

    ಸೋಮ - ಸ್ವಯಂವರದ ಪದ್ಯದಲ್ಲಿ, ಸ್ವಲ್ಪ ಅರ್ಥವಾಗಲಿಲ್ಲ. ಕನಸಿನ ಗೆಳೆಯನ ಗುಣಗಳಿಲ್ಲದ ವರರನ್ನು ಆರಿಸಿದಳು ಎಂದು ಅರ್ಥಮಾಡಿಕೊಂಡೆ. ಕನಸಿನ ಗೆಳೆಯನೂ ಅಲ್ಲಿದ್ದ್ದು ಅವನನ್ನು ಆರಿಸಿದಳೇ?

    ಪ್ರತ್ಯುತ್ತರಅಳಿಸಿ
  11. ರಾಮ್,

    ಹೌದು ಸ್ವಲ್ಪ ಎಡವಟ್ಟಿದೆ :)

    "ಅವಳು ಕನಸಲ್ಲಿ ಬಂದ ರಾಜಕುಮಾರನ ಹಾಗೆ ಯಾರು ಇಲ್ಲ ಹಾಗಾಗಿ ನಿಮ್ಮ ಯಾರನ್ನು ವರಿಸುವುದಿಲ್ಲ ಎಂದು ತೀರ್ಮಾನಿಸುತ್ತಾಳೆ" ಇದು ನನ್ನ ಪರಿಹಾರ. ಈ ಅರ್ಥ ಸ್ಪಷ್ಟ ಆಗುವ ಹಾಗೆ ಸ್ವಲ್ಪ ಬದಲಾಯಿಸಿದ್ದೇನೆ:

    ವನಿತೆ ಹಸ್ತದಿ ಮಾಲೆ ಪಿಡಿದಿರೆ
    ಮನದೊಳುತ್ಸುಕ ರಾಜಕುವರರು
    ನನನೆ ಮೆಚ್ಚುವಳೆನುತ ಕನ್ಯೆಯ ನೋಡೆ ತವಕದಲಿ
    ಕನಸ ಗೆಳೆಯನ ಗುಣಗಳಿಲ್ಲದ-
    ವನೆನೆ ನೋಟದೆ ವರಿಸೆನೆಂದಳು
    ನಿನನು, ನಿನ್ನನು, ನಿನ್ನ, ನಿನ್ನನು, ನಿನ್ನ, ನಿನ್ನನ್ನು

    ಗುಣಗಳಿಲ್ಲದವನೆನೆ - ಗುಣಗಳಿಲ್ಲದವನು ಎಂದು
    ವರಿಸೆ - ವರಿಸುವುದಿಲ್ಲ

    ಮೌಳಿಯವರೇ,
    ನಿಮ್ಮ ಪರಿಹಾರ ಚೆನ್ನಾಗಿದೆ ೨ ಸಾಲುಗಳಲ್ಲಿ ಹೆಸರುಗಳನ್ನ ಹೊಂದಿಸಿರುವುದು ಚೆನ್ನಾಗಿದೆ. ನಾನೂ ಅಭಿಮನ್ಯುವಿನೊಡನೆ ಹೋರಾಟ ಮಾಡಿದವರ ಹೆಸರು ಹಾಕೋಣವೆಂದುಕೊಂಡೆ ಆದರೆ ಛಂದಸ್ಸಿಗೆ ಸಿಗಲಿಲ್ಲ, ಬೇರೆ ದಾರಿ ಹುಡುಕಿದೆ :)

    ಪ್ರತ್ಯುತ್ತರಅಳಿಸಿ
  12. ಹಿರಣ್ಯಕಶಿಪು ಮತ್ತು ಪ್ರಹ್ಲಾದ ಪ್ರಸಂಗ:

    ಮನುಜದಾನವದೇವಲೋಕವು
    ರಣದಿಸೋತಿರೆಸಮರಿರುವರೇನ್
    ನನಗೆನನ್ನಯಬಲಕದರದರ್ಪಕೆನಲಮಲಿನಲಿ|
    ತನಯಬೆದರದೆ ಪೇಳ್ದನಧಮಗೆ
    ವಿನಯಮರೆತರೆ ಭರದಿ ತಳಿಸುವ
    ನಿನನು ನಿನ್ನನು ನಿನ್ನ ನಿನ್ನನು ನಿನ್ನ ನಿನ್ನನ್ನು||

    ಇಲ್ಲಿ ಇನ = ಒಡೆಯ ಎನ್ನುವ ಅರ್ಥದಲ್ಲಿ ಉಪಯೋಗಿಸಿದ್ದೇನೆ.

    ಪ್ರತ್ಯುತ್ತರಅಳಿಸಿ