Vijayanagara ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Vijayanagara ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಜುಲೈ 24, 2011

ಹಂಪೆ - ೩


ರೆಕ್ಕೆ ಬಂದುದು ಹಿಂದು ಧರ್ಮಕೆ
ಹಕ್ಕನಾಗಿರೆ ಮೊದಲ ರಾಜನು
ಬುಕ್ಕ ಕಂಪರು ಬೆನ್ನಿನನುಜರು ಸೊಂಟಕಟ್ಟಿರಲು ||
ಉಕ್ಕಿಸುತಲುತ್ಸಾಹವಿವರಲಿ
ರೊಕ್ಕವನು ಹೊಂದಿಸುತ ರಾಜ್ಯದ
ಟೆಕ್ಕೆಯನು ಹಾರಿಸಲು ಮಾಧವ ಸಾಯನರ ದೀಕ್ಷೆ || ೧ ||

ಪರುಠವಣೆಯ ಭರಾಟೆ ಸಾಗುತೆ
ಹರಡಿದವು ರಾಜ್ಯಾಂಗ ಗಡಿಗಳ -
ವರಿಗಳಾ ಮಟ್ಟಣಿಸಿ ಜಯದಿಂ ರಾಜ್ಯ ಬೆಳೆದೊರೆದು ||
ವರುಷವೆರಡೂವರೆಶತಂಗಳ
ವರೆಗು ಮೆರುಗಿದ ವಿಜಯನಗರವ
ಸಿರಿಯ ಸಂಗಮ, ಸಾಳುವರು, ತುಳುರಾಯರಾಳಿದರು || ೨ ||

ವಿಜಯನಗರದ ರಾಜಕುಲ ಸಾ -
ಮಜನು ಕೃಷ್ಣs ದೇವರಾಯನು
ಸುಜನ ಸುಚರಿತ್ರರನು ಮೆರೆಸಿದ ಸಕಲ ಸದ್ಗುಣನು ||
ಅಜರವಾಗಿಸಿತವನ ಹೆಸರನು
ಸುಜಲ ಯೋಜನೆ ಕಾರ್ಯಚರಣೆ ಖ -
ನಿಜದಲೊರೆದಾ ಕಲೆಗಳೂ ಸಾಹಿತ್ಯ ಸಂಪದವು || ೩ ||

ಕಾಲ ಕ್ರಮದಲಿ ರಾಜ್ಯ ಮದದಿಂ
ಕೇಳರಿಯದಾ ಭೋಗ ಸುಖದಿಂ -
ದಾಳುವಾ ಶೌರ್ಯವನು ಮತ್ತೊಗ್ಗಟ್ಟಣೆಯ ಮರೆತು ||
ಕಾಲು ತೊಡರುವ ಮುಸಲ ರಾಜರ
ಹೇಳಹೆಸರಿಲ್ಲದವೊಲಡಗದೆ
ಶೂಲಕಿಟ್ಟರು ರಾಜ್ಯಸಿರಿಯನು ಮುಗಿಸುತಂಕವನು || ೪ ||

- ರಾಮಚಂದ್ರ

ಶುಕ್ರವಾರ, ಜುಲೈ 8, 2011

ಹಂಪೆ - ೧

ಲಿಂಗ ಪಂಪಾಪತಿಯದಾಲಯ
ತುಂಗಭದ್ರೆಯ ಬಲದ ತಟದಲಿ
ಭಂಗಗೊಂಡಿಹ ಹಂಪೆಯೂರಲಿ ಕಂಡು ನಿಂದಿಹುದು ||
ಸಿಂಗ ಸಂಗಮ ರಾಯರಾಳಿದ
ಸಾಂಗ ವಿಜಯದ ನಗರ ಮೆರುಗಿದ
ಜಂಘ ಕಡಿದಾ, ಶೌರ್ಯ ನೀಗಿದ ಪಾಳು ಸಾಕ್ಷಿಯಲಿ || ೧ ||

ಎತ್ತ ನೋಡಿದರತ್ತ ಗುಡಿಗಳ
ಕೆತ್ತನೆಯು ಮುಕ್ಕಾದ ನೋಟವೆ
ಸತ್ತ ನಗರದ ಶೋಭೆಯಿಂದಿಗು ಮುದವ ತರಲಹುದೇ? ||
ಎತ್ತ ಮಹಿಷರ ಭವ್ಯದರಮನೆ ?
ಮತ್ತೆ ಅಂದಿನ ಸಿರಿತನಾದಿಗ -
ಳೆತ್ತಣಿನ ಕಲ್ಮಣ್ಣು ಪೇಳವೆ ಗತದ ನಲ್ಗತೆಯಾ? || ೨ ||

ಕತ್ತಲಿನ ಚಳಿ ಬೆಳಗಿನುರಿಯಾ
ಸುತ್ತಲೂ ಬಿರುಸಾದ ಡಕ್ಕಣ
ವೆತ್ತಲೆತ್ತಲೊ ಬಂಡೆಗಳ ವಿನ್ಯಾಸದಾಕೃತಿಗಳ್ ||
ಭತ್ತ ಕಬ್ಬಿನ ಬೆಳೆಗೆ ಹಸಿರ -
ನ್ನಿತ್ತುದಾಕಾಲುವೆಯ ತುಂಗಾ
ಮತ್ತೆ ಶಿಲ್ಪದ ಕಾಯಕದೊಳಿಂದಾದ ಸುಂದರತೆ || ೩ ||

ಪಾಳು ಪಂಪೆಯ ಪೂರ್ಣ ನೋಟಕೆ
ಗಾಳಿ ಹಿತದಾ ಸಂಜೆ ಸಮಯ
ಲೇಳು ನಡೆ ಮಾತಂಗ ಪರ್ವತವೇರು ಹುರುಪಿನಲಿ ||
ಕಾಲ ಪಥದಲಿ ಮಳಲೊಳಿಂಗಿದ
ಗೋಳುಗಟ್ಟಿದ ಸಿರಿಯ ಸೊಬಗಾ
ಬೀಳಲೆರಗುವ ರವಿಯು ದೊರಕಿಸೊ ನೋಟ ದಿವ್ಯಮಯ || ೪ ||

ನೈರುತದಲೊಂಬತ್ತು ಮೈಲಿಗೆ
ವೈರಿಗಳ ತಡೆಗಾಗಿ ದುರ್ಗವು
ದ್ವಾರವಾಗಮಕಾಗಿಯಿದ್ದುದು ಶಕ್ತ ರಕ್ಷೆಯಲಿ ||
ಪಾರುಪತ್ಯದ ತಾಣ ಹೊರಗು
ತ್ತರದಲಾನೆಯಗುಂದಿಯಿದ್ದುದು
ಸೂರಿ ಮೂಡುವ ದಿಕ್ಕಿನೆಡೆ ಕಂಪಿಲಿಯ ರಕ್ಷಣೆಯು || ೫ ||

ಮಾಗದಾ ಯೌವನದಲೊಲಿದಾ
ನಾಗಲಾದೇವಿಯನೆ ನಂತರ
ದೇಗುಲದೆ ವರಿಸಿದನು ಕೃಷ್ಣನು ಸಂಗಮಾಧಿಪನು ||
ಈಗಿನಾ ಹೊಸಪೇಟೆ ನಗರವು
ನಾಗಲಾಪುರವೆಂದು, ಮಡದಿಯ
ಭೋಗದಿಂ ಕಟ್ಟಿದ್ದ ಪುರವಾಗಿತ್ತು ಪ್ರೀತಿಯಲಿ || ೬ ||

ನಾಗಲಾಪುರದಗ್ನಿಮೂಲೆಗೆ [ದಾಗ್ನೆಯದಲಿs]
ಸಾಗಿದೊಡೆ ಸಿಕ್ಕುವುದು ಕೊಂಡವು
ಜಾಗ ಮೇಲಿನ ಹದದಿ ಜಂಬೂನಾಥನಾಲಯವು ||
ಯೋಗವಿಲ್ಲಿಯ ನೀರ ಬುಗ್ಗೆಯು
ರೋಗಿಗಳ ಬಲು ರೋಗಗಳ ಗುಣ -
ವಾಗಿಸುವುದೆಂದೆಂಬ ಧೃಢ ವಿಶ್ವಾಸ ಬಹು ಜನಕೆ || ೭ ||

ಹೋಗೆ ಹಂಪೆಯ ಕಡೆಗೆ ರಸ್ತೆಯ
ದಾಗ ಬಯಲಷ್ಟಗಲವಿರ್ದುದು
ಬಾಗಿದೆಡೆ ಮಾರುತ್ತಲಿದ್ದರು ಸಕಲ ವಸ್ತುಗಳ ||
ಸಾಗೆ ನಾಲಕು ಮೈಲು ದೂರದಿ
ಬೇಗೆ ದಾರಿಯ ಹೋಕರೆಲ್ಲರ
ನೀಗೆ ಕಟ್ಟಿದ ಬಾವಿಯಿರ್ಪುದು ಸೂಳೆವೆಸರಿನಲಿ || ೮ ||

ಕಮಲಪುರದಾ ಹತ್ತಿರದಲೊಂ -
ದು ಮಡುವಿರ್ಪುದು ಬದುವ ಬದಿಯಲಿ
ವಿಮಲ ನೀರಲಿ ಮೀನುಗಳು ಮತ್ತಿತರ ಜಲಜಗಳು ||
ಅಮರಿಸಿದುದಾ ರಾಯ ಕಾಲುವೆ
ಗಮಿಸಿ ತುಂಗೆಯ, ಮಡುವ ಮಡಿಲಿಗೆ
ಸಮದಿ ನೀರಾವರಿಯು ಐನೂರೆಕರೆಗಳ ಬೆಳೆಗೆ || ೯ ||

ಗುಡಿಯದದು ಪಟ್ಟಾಭಿರಾಮನ
ನಡೆಯಲರ್ಧದ ಮೈಲು ಪೂರ್ವಕೆ
ಕಡೆಗೆ ಪೋಳಿಗ ಕೋಟೆಯದು ಕಾಣ್ ಚೂರು ಪಾರುಗಳು ||
ಎಡಕೆ ಸಾಗುವ ಹಂಪೆ ರಸ್ತೆಯ
ಕಡೆಗೆ ನಡೆದರೆ ಬಹಳ ಚೋದಗ
ಗುಡಿಗಳೂ ಗೋಪುರಗಳೂ ಕಟ್ಟಡಗಳಟ್ಟಗಳು || ೧೦ ||

[ಇನ್ನೂ ಮುಂದುವರಿಯಲಿದೆ ... :-)]

- ರಾಮಚಂದ್ರ