Sangamas ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Sangamas ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜುಲೈ 15, 2011

ಹಂಪೆ - ೨

ವಾಲಿ ಸುಗ್ರೀವಾದಿ ವಾನರ
ಪಾಲಕರ ಕಿಷ್ಕಿಂಧೆ ನಾಡಿದು
ಬಾಲಕನು ಹುಟ್ಟಿದ್ದುದಂಜನದೇವಿಗಿಲ್ಲೆಂದು ||
ವಾಲಿಯಾ ಭಯದಿಂದ ತಮ್ಮನು
ಕಾಲ ಕಳೆದನು ಬಂಟರೊಡನೆಂ
ಪೇಳುವರು ಹೊಂಚಿದ್ದುದನು ಮಾತಂಗ ಪರ್ವತದಿ || ೧ ||

ನದಿಯು ಪಂಪೆಯು, ತುಂಗಭದ್ರೆಯೆ
ಯದರ ಬಳಿಯಲೆ ಋಷ್ಯಮೂಕವ -
ದೆದುರು ಆನೆಯಗುಂದಿಯೆಡೆ ಪಂಪಾಸರೋವರವು ||
ಕದಿದು ರಾವಣನೊಯ್ಯೆ ಸೀತೆಯು
ವೊದಗಿದಾಗೊಗೆದಿದ್ದ ತೊಡವ -
ನ್ನದನು ಬಿದ್ದಾ ಕಾಯ್ದ ತಾಣವನಿಲ್ಲೆ ತೋರುವರು || ೨ ||

ಕೊಂದು ವಾಲಿಯ ರಾಮಚಂದ್ರನು
ತಂದು ಸುಗ್ರೀವನನು ರಾಜನ
ನಂದು ಮಾಡಿಸಿ ನುಳಿದ ಬೆಟ್ಟದಿ ಮಾಲ್ಯವಂತದಲಿ ||
ಹಿಂದೆ ರಾಮಾಯಣದಲಾ ಕಿ -
ಷ್ಕಿಂಧೆ ಕಾಂಡದ ತಾಣಗಳನಾ
ವಿಂದು ಕಂಡರೆ ಮೂಢರಾ ನಂಬಿಕೆಗಳೋ ನಿಜವೋ? || ೩ ||

~ * ~ * ~ * ~

ಇಸವಿ ಹದಿಮೂರ್ನೂರ ಆರಲಿ
ನಸಿದ ಹತ್ತಿಪ್ಪತ್ತು ವರ್ಷಗ -
ಳಸುರ ಪೀಡೆಯು ದಕ್ಷಿಣಕು ಬಡಿದಿದ್ದ ದುರ್ದಿನಗಳ್ ||
ಮುಸಲ ಖಿಲ್ಜಿಯು ದಿಲ್ಲಿಯಲಿ ತಾ -
ನೆಸಗಿ ದಬ್ಬಾಳಿಕೆಯ ಬಲು ನಂ -
ದಿಸಲು ಕ್ಷತ್ರಿಯ ಶಕ್ತಿಯನು ನುಗ್ಗಿದನು ದಕ್ಷಿಣಕೆ || ೪ ||

ಮಲ್ಲಿಕಾಫರನವನ ಬಂಟನ -
ದಿಲ್ಲಿ ಬಂದಕ್ಕಿಸಿದ ಕ್ರೂರಿಯು
ಹಲ್ಲು ಮಸೆಯುತ ನುಂಗಿದಾ ಚೆದುರಿದ್ದ ರಾಜ್ಯಗಳಾ ||
ಇಲ್ಲದಿರೆಯೊಗ್ಗಟ್ಟದಿವರಲಿ
ಸಲ್ಲುವುದೆ ರಾಜ್ಯಗಳ ರಕ್ಷಣೆ
ಕಲ್ಲು ಸಕ್ಕರೆ ಕಠಿನವಲ್ಲವೆ ಹುಡಿಗೆ ಹೋಲಿಸಿರೆ || ೫ ||

ಸೋಲಿಸಿದನಾ ದೇವಗಿರಿಯ -
ನ್ನಾಳುತಿರ್ದಾ ಯಾದವರ ಮುಂ -
ಬೀಳಿಸಿದನವನೊರಂಗಲ್ಲಿನ ಕಾಕತೀಯರನು ||
[ಕೀಳು ರಾಮೆಶ್ವರವ ಗೆಡಿಸಿ]
ಕೀಳುಗೆಡಿಸುತ ರಾಮಸೇತುವ
ಗಾಳಿಸಿ ಶ್ರೀರಂಗ ಮಧುರೆಯ
ತೋಳ ಕುರಿಯಂ ಮುರಿದವೋಲಾ ದೋರಸಂದ್ರವನು [ದ್ವಾರಸಮಂದರಮಂ] ||‌ ೬ ||

ಹಿಂದು ಶಕ್ತಿಯ ದಕ್ಷಿಣದಲೀ
ಮುಂದೆ ನುಗ್ಗಿದ ಯವನ ಶಕ್ತಿಯು
ಬಂಧಿಸುತ ಕೊನೆಗೊತ್ತುವಂತೆಯೆ ತೋರಿದಾ ದಿನಗಳ್ ||
ಬೆಂದು ಬಳಲಿದ ಹೊಯ್ಸಳರ ಕುಲ
ನಂದುತಿರ್ದಂತೆಯೆಲೆ ಹುಟ್ಟಿದು -
ದಂದು ವಿದ್ಯಾರಣ್ಯ ಪ್ರೇರಿತ ಸಂಗಮರ ಯುಗವು || ೭ ||

- ರಾಮಚಂದ್ರ

ಶುಕ್ರವಾರ, ಜುಲೈ 8, 2011

ಹಂಪೆ - ೧

ಲಿಂಗ ಪಂಪಾಪತಿಯದಾಲಯ
ತುಂಗಭದ್ರೆಯ ಬಲದ ತಟದಲಿ
ಭಂಗಗೊಂಡಿಹ ಹಂಪೆಯೂರಲಿ ಕಂಡು ನಿಂದಿಹುದು ||
ಸಿಂಗ ಸಂಗಮ ರಾಯರಾಳಿದ
ಸಾಂಗ ವಿಜಯದ ನಗರ ಮೆರುಗಿದ
ಜಂಘ ಕಡಿದಾ, ಶೌರ್ಯ ನೀಗಿದ ಪಾಳು ಸಾಕ್ಷಿಯಲಿ || ೧ ||

ಎತ್ತ ನೋಡಿದರತ್ತ ಗುಡಿಗಳ
ಕೆತ್ತನೆಯು ಮುಕ್ಕಾದ ನೋಟವೆ
ಸತ್ತ ನಗರದ ಶೋಭೆಯಿಂದಿಗು ಮುದವ ತರಲಹುದೇ? ||
ಎತ್ತ ಮಹಿಷರ ಭವ್ಯದರಮನೆ ?
ಮತ್ತೆ ಅಂದಿನ ಸಿರಿತನಾದಿಗ -
ಳೆತ್ತಣಿನ ಕಲ್ಮಣ್ಣು ಪೇಳವೆ ಗತದ ನಲ್ಗತೆಯಾ? || ೨ ||

ಕತ್ತಲಿನ ಚಳಿ ಬೆಳಗಿನುರಿಯಾ
ಸುತ್ತಲೂ ಬಿರುಸಾದ ಡಕ್ಕಣ
ವೆತ್ತಲೆತ್ತಲೊ ಬಂಡೆಗಳ ವಿನ್ಯಾಸದಾಕೃತಿಗಳ್ ||
ಭತ್ತ ಕಬ್ಬಿನ ಬೆಳೆಗೆ ಹಸಿರ -
ನ್ನಿತ್ತುದಾಕಾಲುವೆಯ ತುಂಗಾ
ಮತ್ತೆ ಶಿಲ್ಪದ ಕಾಯಕದೊಳಿಂದಾದ ಸುಂದರತೆ || ೩ ||

ಪಾಳು ಪಂಪೆಯ ಪೂರ್ಣ ನೋಟಕೆ
ಗಾಳಿ ಹಿತದಾ ಸಂಜೆ ಸಮಯ
ಲೇಳು ನಡೆ ಮಾತಂಗ ಪರ್ವತವೇರು ಹುರುಪಿನಲಿ ||
ಕಾಲ ಪಥದಲಿ ಮಳಲೊಳಿಂಗಿದ
ಗೋಳುಗಟ್ಟಿದ ಸಿರಿಯ ಸೊಬಗಾ
ಬೀಳಲೆರಗುವ ರವಿಯು ದೊರಕಿಸೊ ನೋಟ ದಿವ್ಯಮಯ || ೪ ||

ನೈರುತದಲೊಂಬತ್ತು ಮೈಲಿಗೆ
ವೈರಿಗಳ ತಡೆಗಾಗಿ ದುರ್ಗವು
ದ್ವಾರವಾಗಮಕಾಗಿಯಿದ್ದುದು ಶಕ್ತ ರಕ್ಷೆಯಲಿ ||
ಪಾರುಪತ್ಯದ ತಾಣ ಹೊರಗು
ತ್ತರದಲಾನೆಯಗುಂದಿಯಿದ್ದುದು
ಸೂರಿ ಮೂಡುವ ದಿಕ್ಕಿನೆಡೆ ಕಂಪಿಲಿಯ ರಕ್ಷಣೆಯು || ೫ ||

ಮಾಗದಾ ಯೌವನದಲೊಲಿದಾ
ನಾಗಲಾದೇವಿಯನೆ ನಂತರ
ದೇಗುಲದೆ ವರಿಸಿದನು ಕೃಷ್ಣನು ಸಂಗಮಾಧಿಪನು ||
ಈಗಿನಾ ಹೊಸಪೇಟೆ ನಗರವು
ನಾಗಲಾಪುರವೆಂದು, ಮಡದಿಯ
ಭೋಗದಿಂ ಕಟ್ಟಿದ್ದ ಪುರವಾಗಿತ್ತು ಪ್ರೀತಿಯಲಿ || ೬ ||

ನಾಗಲಾಪುರದಗ್ನಿಮೂಲೆಗೆ [ದಾಗ್ನೆಯದಲಿs]
ಸಾಗಿದೊಡೆ ಸಿಕ್ಕುವುದು ಕೊಂಡವು
ಜಾಗ ಮೇಲಿನ ಹದದಿ ಜಂಬೂನಾಥನಾಲಯವು ||
ಯೋಗವಿಲ್ಲಿಯ ನೀರ ಬುಗ್ಗೆಯು
ರೋಗಿಗಳ ಬಲು ರೋಗಗಳ ಗುಣ -
ವಾಗಿಸುವುದೆಂದೆಂಬ ಧೃಢ ವಿಶ್ವಾಸ ಬಹು ಜನಕೆ || ೭ ||

ಹೋಗೆ ಹಂಪೆಯ ಕಡೆಗೆ ರಸ್ತೆಯ
ದಾಗ ಬಯಲಷ್ಟಗಲವಿರ್ದುದು
ಬಾಗಿದೆಡೆ ಮಾರುತ್ತಲಿದ್ದರು ಸಕಲ ವಸ್ತುಗಳ ||
ಸಾಗೆ ನಾಲಕು ಮೈಲು ದೂರದಿ
ಬೇಗೆ ದಾರಿಯ ಹೋಕರೆಲ್ಲರ
ನೀಗೆ ಕಟ್ಟಿದ ಬಾವಿಯಿರ್ಪುದು ಸೂಳೆವೆಸರಿನಲಿ || ೮ ||

ಕಮಲಪುರದಾ ಹತ್ತಿರದಲೊಂ -
ದು ಮಡುವಿರ್ಪುದು ಬದುವ ಬದಿಯಲಿ
ವಿಮಲ ನೀರಲಿ ಮೀನುಗಳು ಮತ್ತಿತರ ಜಲಜಗಳು ||
ಅಮರಿಸಿದುದಾ ರಾಯ ಕಾಲುವೆ
ಗಮಿಸಿ ತುಂಗೆಯ, ಮಡುವ ಮಡಿಲಿಗೆ
ಸಮದಿ ನೀರಾವರಿಯು ಐನೂರೆಕರೆಗಳ ಬೆಳೆಗೆ || ೯ ||

ಗುಡಿಯದದು ಪಟ್ಟಾಭಿರಾಮನ
ನಡೆಯಲರ್ಧದ ಮೈಲು ಪೂರ್ವಕೆ
ಕಡೆಗೆ ಪೋಳಿಗ ಕೋಟೆಯದು ಕಾಣ್ ಚೂರು ಪಾರುಗಳು ||
ಎಡಕೆ ಸಾಗುವ ಹಂಪೆ ರಸ್ತೆಯ
ಕಡೆಗೆ ನಡೆದರೆ ಬಹಳ ಚೋದಗ
ಗುಡಿಗಳೂ ಗೋಪುರಗಳೂ ಕಟ್ಟಡಗಳಟ್ಟಗಳು || ೧೦ ||

[ಇನ್ನೂ ಮುಂದುವರಿಯಲಿದೆ ... :-)]

- ರಾಮಚಂದ್ರ